ಸೇನೆ-ಉಗ್ರರ ನಡುವೆ ಗುಂಡಿನ ಚಕಮಕಿ: ಓರ್ವ ಯೋಧ, ಉಗ್ರ ಸಾವು
ಶ್ರೀನಗರ: ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿದ್ದ ಇಬ್ಬರು ಉಗ್ರರರನ್ನು ಹತ್ಯೆ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡಿದ್ದ ಮತ್ತೊಬ್ಬ ಉಗ್ರನನ್ನು ಸೇನೆ ಹತ್ಯೆ ಮಾಡಿದೆ. ಆದರೆ ಈ ವೇಳೆ ಓರ್ವ ಯೋಧನನ್ನು ಸೇನೆ ಕಳೆದುಕೊಂಡಿದೆ.
ನಿನ್ನೆ ರಾತ್ರಿ ಉತ್ತರ ಕಾಶ್ಮೀರದ ಕುಪವಾರ ಜಿಲ್ಲೆಯ ತಂಗ್ದಾರ್ ಸೆಕ್ಟರ್‌ನ ಬಳಿ ಅಕ್ರಮವಾಗಿ ನುಸುಳುತ್ತಿದ್ದ ಉಗ್ರರ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಉಗ್ರನನ್ನು ಹತ್ಯೆಮಾಡಲಾಗಿದೆ. ಆದರೆ ದಾಳಿಯ ವೇಳೆ ಭಾರತೀಯ ಯೋಧನೊರ್ವ ಮೃತಪಟ್ಟಿರುವುದಾಗಿ ಸೇನಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕಳೆದ ಗುರುವಾರ ಗಡಿಯೊಳಗೆ ಇಬ್ಬರು ಉಗ್ರಗಾಮಿಗಳು ನುಸುಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಭಾರತೀಯ ಸೇನೆ ದಾಳಿ ಮಾಡಿದೆ. ಆ ಸಂದರ್ಭದಲ್ಲಿ ಓರ್ವ ಉಗ್ರಗಾಮಿಯನ್ನು ಹತ್ಯೆ ಮಾಡಲಾಗಿತ್ತು. ಆದರೆ ಮತ್ತೋರ್ವ ಉಗ್ರ ತಪ್ಪಿಸಿಕೊಂಡಿದ್ದ, ಕಾರ್ಯಾಚರಣೆ ಮುಂದೂವರೆಸಿದ ಸೇನಾಪಡೆ ತಪ್ಪಿಸಿಕೊಂಡಿದ್ದ ಮತ್ತೊರ್ವ ಉಗ್ರನನ್ನೂ ಹತ್ಯೆಮಾಡುವಲ್ಲಿ ಇಂದು ಯಶಸ್ವಿಯಾಗಿದೆ.
ದಾಳಿಯ ಬಳಿಕ ಉಗ್ರನು ಬಳಸುತ್ತಿದ್ದ ಒಂದು ಎ.ಕೆ. 47 ರೈಫಲ್ ಅನ್ನು ಸೇನೆ ವಶಪಡಿಸಿಕೊಂಡಿದೆ. ಕಳೆದ ಆರು ದಿನಗಳಿಂದ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ನಡೆದ ಕಾರ್ಯಚರಿಣೆಯಲ್ಲಿ ಒಟ್ಟು 12 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.