ಹೈದರಾಬಾದ್ಗೆ ಕೇಂದ್ರಾಡಳಿತ ಸ್ಥಾನ ನೀಡಬಾರದು: ಕೆಸಿಆರ್
ತೆಲಂಗಾಣ ಮತ್ತು ಆಂಧ್ರ ಪ್ರದೇಶವನ್ನು ಕಾಯಂ ಜಂಟಿ ರಾಜಧಾನಿಯಾಗಿ ಅಥವಾ ಹೈದರಾಬಾದ್ಗೆ ಕೇಂದ್ರಾಡಳಿತ ಸ್ಥಾನಮಾನ...
ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರ ಪ್ರದೇಶವನ್ನು ಕಾಯಂ ಜಂಟಿ ರಾಜಧಾನಿಯಾಗಿ ಅಥವಾ ಹೈದರಾಬಾದ್ಗೆ ಕೇಂದ್ರಾಡಳಿತ ಸ್ಥಾನಮಾನ ನೀಡುವುದಕ್ಕೆ ತಮ್ಮ ಸಮ್ಮತಿ ಇಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಮುಖ್ಯಸ್ಥ ಕೆ. ಚಂದ್ರಶೇಕರ ರಾವ್ ಭಾನುವಾರ ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ನಿರ್ಧರಿಸಿರುವಂತೆ ಆಂಧ್ರ ಪ್ರದೇಶ ಸರ್ಕಾರ 10 ವರ್ಷಗಳ ಕಾಲ ಇಲ್ಲಿಂದ ರಾಜ್ಯಭಾರ ಮಾಡುವುದಕ್ಕೆ ತಮ್ಮ ವಿರೋಧವಿಲ್ಲ. ಆದರೆ ತೆಲಂಗಾಣ ಸರ್ಕಾರವು ಹೈದರಾಬಾದ್ ಆಡಳಿತವನ್ನು ನೋಡಿಕೊಳ್ಳುತ್ತದೆ ಎಂದು ಕೆಸಿಆರ್ ಸ್ಪಷ್ಟಪಡಿಸಿದ್ದಾರೆ.
ತೆಲಂಗಾಣ ರಾಜ್ಯ ರಚನೆಯ ನಿರ್ಧಾರವನ್ನು ಪ್ರತಿಭಟಿಸಿ ಸೀಮಾಂಧ್ರದಲ್ಲಿ ಪ್ರತಿಭಟನೆ ಕಾವು ಜೋರಾಗಿದ್ದು, ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವಂತೆ ಸೀಮಾಂಧ್ರದ ಹಲವಾರು ನಾಯಕರು ಸಲಹೆ ಮುಂದಿಟ್ಟಿದ್ದರು. ಆದರೆ ತೆಲಂಗಾಣ ಜನತೆಗೆ ಈ ಸಲಹೆ ಸ್ವಾಗತಾರ್ಹ ಅಲ್ಲ ಎಂದು ಕೆಸಿಆರ್ ಹೇಳಿದ್ದಾರೆ.
ತೆಲಂಗಾಣ ಪತ್ರಕರ್ತರ ವೇದಿಕೆ ಆಯೋಜಿಸಿದ್ದ ಪತ್ರಿಕಾ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಶೇಖರ ರಾವ್ ಅವರು, ಹೈದರಾಬಾದಿಗೆ ಕೇಂದ್ರಾಡಳಿತ ಸ್ಥಾನಮಾನ ನೀಡುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದ್ದಾರೆ. ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಭಾಯಿಸುವುದು ಅವರ ಸರ್ಕಾರಕ್ಕೆ ಬಿಟ್ಟ ವಿಷಯ. ಹೀಗಾಗಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ರಾವ್ ಹೇಳಿದ್ದಾರೆ.