'108' ಮುಷ್ಕರ: 194 ಸಿಬ್ಬಂದಿ ಕೆಲಸದಿಂದ ವಜಾ
ಉದ್ಯೋಗ ಭದ್ರತೆ ಹಾಗೂ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಕವಚ(108) ಸಿಬ್ಬಂದಿಗಳಿಗೆ ಕೆಲಸಕ್ಕೆ...
ಬೆಂಗಳೂರು: ಉದ್ಯೋಗ ಭದ್ರತೆ ಹಾಗೂ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆರೋಗ್ಯ ಕವಚ(108) ಸಿಬ್ಬಂದಿಗಳಿಗೆ ಕೆಲಸಕ್ಕೆ ಮರಳಲು ನೀಡಿದ್ದ ಗಡುವು ಅಂತ್ಯಗೊಂಡ ಹಿನ್ನಲೆಯಲ್ಲಿ ಸೋಮವಾರ 194 ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
108ರ ಸಿಬ್ಬಂದಿಗಳು ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದು, ಜಿವಿಕೆ ನೀಡಿದ್ದ ಗಡುವಿಗೂ ಹೆದರದೆ ಪ್ರತಿಭಟನೆ ಮುಂದುವರೆಸಿದ ಹಿನ್ನಲೆಯಲ್ಲಿ 194 ಸಿಬ್ಬಂದಿಯನ್ನು ಜಿವಿಕೆ ವಜಾಗೊಳಿಸಿದೆ.
ತಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಆರೋಗ್ಯ ಕವಚ ನಿರ್ವಹಣಾ ಸಂಸ್ಥೆ ಜಿವಿಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಿಬ್ಬಂದಿ ಪ್ರತಿಭಟನೆ ಕೈಗೊಂಡಿದ್ದರು.
108ರ ಸಿಬ್ಬಂದಿಗಳಿಗೆ ಕೆಲಸಕ್ಕೆ ಮರಳಲು ಜಿವಿಕೆ 24 ಗಂಟೆಗಳ ಗಡುವು ನೀಡಿತ್ತು. ಆದರೆ ಗಡುವು ಮುಕ್ತಾಯವಾದರು ಸಿಬ್ಬಂದಿ ಕೆಲಸಕ್ಕೆ ಮರಳದೇ ಇರುವುದರಿಂದ 194 ಸಿಬ್ಬಂದಿಗಳನ್ನು ವಜಾಗೊಳಿಸಿದೆ.
ಇನ್ನುಳಿದ ಸಿಬ್ಬಂದಿಗಳಿಗೆ ರಾತ್ರಿ 8 ಗಂಟೆವರೆಗೆ ಗಡುವು ನೀಡಿದ್ದು, ಅವರು ಕೆಲಸಕ್ಕೆ ಮರಳದೇ ಇದ್ದರೇ ಅವರನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಜಿವಿಕೆ ಎಚ್ಚರಿಸಿದೆ.
ಜಿವಿಕೆ ಕ್ರಮವನ್ನು ಖಂಡಿಸಿರುವ ಪ್ರತಿಭಟನಾಕಾರರು, ಜಿವಿಕೆ ಬೆದರಿಕೆಗೆ ಹೆದರಲ್ಲ, ನಮ್ಮ ಬೇಡಿಕೆ ಈಡೇರಿಕೆಯವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಆರೋಗ್ಯ ಕವಚ ಯೋಜನೆ ನಿರ್ವಹಿಸುತ್ತಿರುವ ಜಿವಿಕೆ ಸಂಸ್ಥೆ ವಿರುದ್ಧ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ಭಾನುವಾರದಿಂದ ಪ್ರತಿಭಟನೆ ನಡೆಸುತ್ತಿರುವ ನೂರಾರು ಸಿಬ್ಬಂದಿ, ಸಂಸ್ಥೆ ತಮ್ಮ ಸಮಸ್ಯೆ ನಿವಾರಣೆಗೆ ಸ್ಪಂದಿಸದೇ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ತಮಗೆ ಉದ್ಯೋಗ ಭದ್ರತೆ ಒದಗಿಸಿ, ಕನಿಷ್ಟ ರು.15 ಸಾವಿರ ವೇತನ ನಿಗದಿಪಡಿಸಬೇಕು ಎಂದು 108ರ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.