ಅಖಿಲೇಶ್ ಸರ್ಕಾರದ ನಿರ್ಧಾರ ಸರಿ ಮತ್ತು ಅಂತಿಮ: ಮುಲಾಯಂ
ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರನ್ನು ಅಮಾನತುಗೊಳಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸರ್ಕಾರದ ನಿರ್ಧಾರ ಸರಿ...
ನವದೆಹಲಿ: ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರನ್ನು ಅಮಾನತುಗೊಳಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸರ್ಕಾರದ ನಿರ್ಧಾರ ಸರಿ ಮತ್ತು ಅದೇ ಅಂತಿಮವಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಸೋಮವಾರ ಹೇಳಿದ್ದಾರೆ.
ಸರ್ಕಾರ ಈ ಕ್ರಮ ಕೈಗೊಳ್ಳದಿದ್ದರೆ ಅದು ತಪ್ಪಾಗಿರುತ್ತಿತ್ತು. ಆದರೆ ಅಖಿಲೇಶ್ ಸರ್ಕಾರ ಕೈಗೊಂಡಿರುವ ಕ್ರಮ ಸರಿ ಮತ್ತು ಅದೇ ಅಂತಿಮವಾಗಿದೆ ಎಂದು ಹೇಳುವುದರ ಮೂಲಕ ಮುಲಾಯಂ ಅವರು ಪುತ್ರ ಅಖಿಲೇಶ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ದುರ್ಗಾ ಶಕ್ತಿ ಅವರ ವಿರುದ್ಧ ದೃಢವಾದ ಆಧಾರ ದೊರೆತ ಹಿನ್ನಲೆಯಲ್ಲೇ ಅವರನ್ನು ಅಮಾನತು ಮಾಡಲಾಗಿದೆ. ಇದರ ಬಗ್ಗೆ ಮತ್ತೆ ಪರಿಶೀಲಿಸುವ ಅಗತ್ಯತೆ ಇಲ್ಲ. ಸರ್ಕಾರ ಸರಿಯಾದ ರೀತಿಯಲ್ಲೇ ಕ್ರಮ ಕೈಗೊಂಡಿದೆ ಎಂದು ಅಖಿಲೇಶ್ ಯಾದವ್ ಅವರು ಹೇಳಿದ್ದರು.
ದುರ್ಗಾ ಶಕ್ತಿ ಅವರ ಅಮಾನತು ಸರಿ ಎಂದು ಸಮರ್ಥಿಸಿಕೊಂಡಿರುವ ಅಖಿಲೇಶ್, ಯಾವುದೇ ಅಧಿಕಾರಿಗಳು ತಪ್ಪು ಮಾಡಿದರೆ ಅವರ ವಿರುದ್ಧ ಇದೇ ರೀತಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ತಪ್ಪು ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವುದೇ ಸರ್ಕಾರದ ಕೆಲಸ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ದುರ್ಗಾ ಮುಂದಾಗಿದ್ದರು. ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜುಲೈ 27 ರಂದು ದುರ್ಗಾ ಅವರನ್ನು ಅಮಾನತುಗೊಳಿಸಿದ್ದರು.
ಇದನ್ನು ವಿರೋಧಿಸಿ ಉತ್ತರ ಪ್ರದೇಶದ ಐಎಎಸ್ ಅಧಿಕಾರಿಗಳ ಸಂಘ ಪ್ರತಿಭಟನೆ ನಡೆಸಿತ್ತು.