ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೆಂಗಳೂರು: ಕಟ್ಟಡ ಕುಸಿದು 3 ಸಾವು

ಕೆಂಗೇರಿಯ ಬಂಡೆಮಠ ಬಳಿ ಸೋಮವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 3 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ...

Vishwanath S
Updated On : 5 Aug 2013, 5:45 am

ಬೆಂಗಳೂರು: ಕೆಂಗೇರಿಯ ಬಂಡೆಮಠ ಬಳಿ ಸೋಮವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 3 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಇಂದು ಮುಂಜಾನೆ ನಿರ್ಮಾಣ ಹಂತದಲ್ಲಿದ್ದ ಕಲ್ಯಾಣ ಮಂಟಪ ಕಟ್ಟಡ ಕುಸಿದಿದೆ. ಇದರಿಂದಾಗಿ ಕಟ್ಟಡ ಅವಶೇಷಗಳಡಿಯಲ್ಲಿ ಸಿಲುಕಿ 3 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ  ಅವಶೇಷಗಳಡಿ ಸಿಲುಕಿದ್ದ 12 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಲಾಗಿದ್ದು ಅವರನ್ನು ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಟ್ಟಡದ ಸೆಂಟ್ರಿಂಗ್ ಕುಸಿದಿರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ 8 ಅಗ್ನಿಶಾಮಕ ವಾಹನಗಳು ಬಂದಿದ್ದು, ಕಟ್ಟಡ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಸುಮಾರು 150 ಸಿಬ್ಬಂದಿ ತೊಡಗಿದ್ದಾರೆ. ಸೆಂಟ್ರಿಂಗ್‌ಗೆ ಕಬ್ಬಿಣದ ರಾಡ್‌ಗಳನ್ನು ಬಳಸಿದ್ದರಿಂದ ಕಾರ್ಯಚರಣೆಗೆ ತೊಡಕಾಗಿದೆ. ರಕ್ಷಣಾ ಸಿಬ್ಬಂದಿ ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದಾಗಿ ಅಗ್ನಿಶಾಮಕ ಅಧಿಕಾರಿ ರಾಚಪ್ಪ ತಿಳಿಸಿದರು.

ಸುದ್ದಿ ತಿಳಿದ ಕೂಡಲೆ ಬೆಂಗಳೂರು ಉಸ್ತುವಾರಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹಾಗೂ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಕಟ್ಟಡ ಕುಸಿತಕ್ಕೆ ಅಜಾಗರೂಕತೆಯೆ ಕಾರಣ ಎಂದು ಮೇಲ್ನೊಟಕ್ಕೆ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು. ಆ ನಂತರ ಆಸ್ಪತ್ರೆಗೆ ತೆರಳಿದ ಸಚಿವರು ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಔರಾದ್ಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅವಶೇಷಗಳಡಿ ಸಿಲುಕಿ ಸುಮಿತ್, ವೆಂಕಟೇಶ್ ಮತ್ತು ಶಿವಣ್ಣ ಎಂಬುವರು ಮೃತಪಟ್ಟಿರುವುದಾಗಿ ತಿಳಿಸಿದರು.

ಬಂಡೆಮಠ ಆಶ್ರಮಕ್ಕೆ ಸೇರಿದ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯವನ್ನು ಗುತ್ತಿಗೆದಾರನಿಗೆ ನೀಡಲಾಗಿತ್ತು. ಸುಮಾರು 8 ತಿಂಗಳಿಂದ ಸತತವಾಗಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಿನ್ನೆಯಷ್ಟೇ ಮೊದಲ ಅಂತಸ್ತಿನ ಸೆಂಟ್ರಿಂಗ್ ಕಾರ್ಯ ಪೂರ್ಣಗೊಂಡಿತ್ತು. ಆದರೆ ಸೆಂಟ್ರಿಂಗ್‌ಗೆ ಹೆಚ್ಚು ಪಿಲ್ಲರ್‌ಗಳು ಬಳಸದೆ ಇದ್ದಿದ್ದರಿಂದ ಅತಿಯಾದ ಭಾರದಿಂದಾಗಿ ಸೆಂಟ್ರಿಂಗ್ ಕುಸಿದಿದೆ. ಘಟನೆ ಸಂಭವಿಸುತ್ತಿದಂತೆ ಗುತ್ತಿಗೆದಾರ, ಮೇಸ್ತ್ರಿ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement