ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯೋಧರ ಹತ್ಯೆ: ಆಂಟನಿ ಹೇಳಿಕೆಗೆ ಬಿಜೆಪಿ ಖಂಡನೆ, ಕ್ಷಮೆಗೆ ಆಗ್ರಹ

ದಾಳಿ ಮಾಡಿದ್ದು ಪಾಕಿಸ್ತಾನ ಸೈನಿಕರಲ್ಲ. ಬದಲಾಗಿ ಅವರ ವೇಷದಲ್ಲಿದ್ದ ಭಯೋತ್ಪಾದಕರು ಎಂದಿರುವ ರಕ್ಷಣಾ ಸಚಿವ...

Vishwanath S
Updated On : 7 Aug 2013, 12:59 pm

ನವದೆಹಲಿ: ದಾಳಿ ಮಾಡಿದ್ದು ಪಾಕಿಸ್ತಾನ ಸೈನಿಕರಲ್ಲ. ಬದಲಾಗಿ ಅವರ ವೇಷದಲ್ಲಿದ್ದ ಭಯೋತ್ಪಾದಕರು ಎಂದಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಈ ಸಂಬಂಧ ರಕ್ಷಣಾ ಸಚಿವರು ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಬುಧವಾರ ಆಗ್ರಹಿಸಿದೆ.

ಪಾಕ್ ಸೈನಿಕರು ಐವರು ಭಾರತೀಯ ಯೋಧರನ್ನು ಹತ್ಯೆ ಮಾಡಿರುವ ಘಟನೆ ಇಂದು ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ಪಾಕ್ ದುಷ್ಕೃತ್ಯಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಐವರು ಭಾರತೀಯ ಯೋಧರ ಮೇಲೆ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಪ್ರತ್ಯಕ್ಷವಾಗಿ ಕಂಡರೂ, ದಾಳಿ ಮಾಡಿದ್ದು ಪಾಕಿಸ್ತಾನಿ ಸೈನಿಕರಲ್ಲ ಎಂಬ ಆಂಟನಿ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಕಿಡಿಕಾರಿದ್ದಾರೆ.

ಸದನದಲ್ಲಿ ದಾಳಿ ವಿರುದ್ಧ ಧ್ವನಿ ಎತ್ತಿದ ಸುಷ್ಮಾ ಅವರು, ಯೋಧರ ಹತ್ಯೆ ನಡೆಸಿರುವುದು ಪಾಕಿಸ್ತಾನಿ ಸೈನಿಕರೇ ಹೊರತು ಭಯೋತ್ಪಾದಕರಲ್ಲ ಎಂದರು. ಆದರೆ ಯೋಧರ ಮೇಲಿನ ದಾಳಿ ಕುರಿತಾಗಿ ಸಚಿವ ಆಂಟನಿ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಆಂಟನಿ ಅವರು ಇಂತಹ ಅಸಂಬದ್ಧ ಹೇಳಿಕೆ ನೀಡಲು ಕಾರಣವೇನು? ಇದು ದೇಶದ ಜನತೆಗೆ ತಿಳಿಯಬೇಕು. ಅಲ್ಲದೆ ಆಂಟನಿ ಅವರು ಈ ಸಂಬಂಧ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದು ಸುಷ್ಮಾ ಆಗ್ರಹಿಸಿದರು.

ದಾಳಿಯ ವೇಳೆ ಭಯೋತ್ಪಾದಕರ ಜೊತೆ ಪಾಕಿಸ್ತಾನಿ ಯೋಧರು ಇದ್ದರು. ಅಲ್ಲದೆ ಉಗ್ರರು ಪಾಕಿಸ್ತಾನ ಯೋಧರ ಸಮವಸ್ತ್ರ ಧರಿಸಿದ್ದರು ಎಂದು ಭಾರತೀಯ ಸೇನೆ ವರದಿ ನೀಡಿದ್ದರೂ ಆಂಟನಿ ಬೇಜವಾಬ್ದಾರಿ ಹೇಳಿಕೆ ನೀಡಿ ಪಾಕಿಸ್ತಾನ ಸೈನಿಕರು ಯಾವುದೇ ದಾಳಿ ನಡೆಸಿಲ್ಲ ಎಂದು ಕ್ಲೀನ್ ಚಿಟ್ ನೀಡಿರುವುದು ಅಕ್ಷಮ್ಯ ಎಂದರು.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಎಂಬಲ್ಲಿ ಸೋಮವಾರ ರಾತ್ರಿ ಭಾರತದ ಗಸ್ತು ಪಡೆಯ ಮೇಲೆ ಪಾಕಿಸ್ಥಾನ ಸೈನಿಕರು ಗುಂಡಿನ ದಾಳಿ ನಡೆಸಿ ಐವರು ಭಾರತೀಯ ಯೋಧರನ್ನು ಹತ್ಯೆಗೈದಿದ್ದರು. ದಾಳಿಯಲ್ಲಿ ಬಿಹಾರದ 21 ಯುನಿಟ್‌ನ ಸುಬೇದಾರ್ ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಮೃತಪಟ್ಟವರಲ್ಲಿ ಬೆಳಗಾವಿಯಲ್ಲಿರುವ ಮರಾಠ ರೆಜಿಮೆಂಟ್‌ನ ಒಬ್ಬ ಯೋಧ ಕೂಡ ಸೇರಿದ್ದಾರೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement