ಉಗ್ರರ ದಾಳಿ ಸಂಚು; ದೆಹಲಿಯಲ್ಲಿ ಕಟ್ಟೆಚ್ಚರ
ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ಸೂಚನೆಯನ್ವಯ...
ನವದೆಹಲಿ: ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ಸೂಚನೆಯನ್ವಯ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ದೆಹಲಿಯ ವಿಶೇಷ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವಾ ಅವರು ಶುಕ್ರವಾರ ತಿಳಿಸಿದ್ದಾರೆ.
ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ವಯ ಕಟ್ಟೆಚ್ಚರ ವಹಿಸುವಂತೆ ದೆಹಲಿ ಪೊಲೀಸರಿಗೆ ಕೇಂದ್ರ ಗುಪ್ತಚಾರ ಇಲಾಖೆ ಸೂಚಿಸಿತ್ತು.
ದೇಶದ ಶಕ್ತಿ ಕೇಂದ್ರ ದೆಹಲಿಯಲ್ಲಿ ಉಗ್ರರು ವಿಧ್ವಂಸಕ ಕೃತ್ಯವನ್ನು ಎಸಗಲಿದ್ದಾರೆ ಎಂದು ಗುಪ್ತಚಾರ ಇಲಾಖೆ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದು, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಹಾಗೂ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
2008ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಮುಹಮ್ಮದ್ ಸಹೀದ್ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಿ ದೇಶದ ಶಾಂತಿಗೆ ಧಕ್ಕೆ ತರಲು ಯತ್ನಿಸುತ್ತಿದ್ದು, ಈ ಸಂಬಂಧ ಎಚ್ಚರಿಕೆ ವಹಿಸುವಂತೆ ಇಲಾಖೆ ತಿಳಿಸಿದೆ.
ಸ್ವಾತಂತ್ರೋತ್ಸವ ದಿನಾಚರಣೆಗೆ ಕೆಲವೇ ದಿನಗಳು ಅಂತರ ಇರುವುದರಿಂದ ಇದನ್ನೇ ಗುರಿಯಾಗಿರುಸಿಕೊಂಡಿರುವ ಉಗ್ರರು ದೆಹಲಿಯ ಕೆಂಪು ಕೋಟೆ ಬಳಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ರಂಜಾನ್ ಪ್ರಯುಕ್ತ ಇಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪಾರ್ಥನೆಯಲ್ಲಿ ಪಾಲ್ಗೊಂಡಿರುವ ಲಷ್ಕರ್-ಎ-ತೊಯ್ಬಾದ ಸಹೀದ್, ಈ ಸಂದರ್ಭ ಕಟು ಭಾರತ ವಿರೋಧಿ ಸಂದೇಶಗಳನ್ನು ಟ್ವಿಟ್ ಮಾಡುವ ಮೂಲಕ ಈದ್ ಶುಭಾಶಯ ತಿಳಿಸಿದರು.