ಮತ್ತೆ ಕದನ ವಿರಾಮ ಉಲ್ಲಂಘನೆ: ಗಡಿಯಲ್ಲಿ ಭಾರಿ ಗುಂಡಿನ ಕಾಳಗ
ಪಾಕಿಸ್ತಾನ ಸೈನಿಕ ಪಡೆಗಳು ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಉಭಯ ದೇಶಗಳ ನಡುವೆ ನಿರಂತರವಾಗಿ...
ಶ್ರೀನಗರ: ಪಾಕಿಸ್ತಾನ ಸೈನಿಕ ಪಡೆಗಳು ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಉಭಯ ದೇಶಗಳ ನಡುವೆ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿರುವುದಾಗಿ ಭಾನುವಾರ ವರದಿಯಾಗಿದೆ.
ಕಳೆದ 48 ಗಂಟೆಯೊಳಗೆ 3 ಸಾರಿ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನಿ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಮೆಂಧಾರ್‌ನ ಸೆಕ್ಟರ್ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಿದ್ದಾರೆ.
ಪಾಕಿಸ್ತಾನಿ ಸೈನಿಕರ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದು, ಕಳೆದ 2 ಗಂಟೆಗಳಿಂದ ಉಭಯ ದೇಶಗಳ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನಿ ಸೈನಿಕರು ಮೇಂಧಾರ್ ಸೆಕ್ಟರ್‌ನ ಬಾಲಕೋಟೆಯ 5 ಮಿಲಿಟರಿ ಪೋಸ್ಟ್‌ಗಳ ಮೇಲೆ ಇಂದು ಮಧ್ಯಾಹ್ನ 12 ಗಂಟೆಯಿಂದ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.
ಕದನ ವಿರಾಮ ಉಲ್ಲಂಘಿಸಿ, ಶುಕ್ರವಾರ ರಾತ್ರಿ ಸುಮಾರು 10:45ರ ಸುಮಾರಿನಲ್ಲಿ ಕಾಶ್ಮೀರದ ಪೂಂಛ್ ಜಿಲ್ಲೆಯ ದುರ್ಗಾ ಸೆಕ್ಟರ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಭಾರತೀಯ ಯೋಧರತ್ತ ಪಾಕಿಸ್ತಾನಿ ಪಡೆಗಳು ಭಾರಿ ಗುಂಡಿನ ದಾಳಿ ನಡೆಸಿವೆ. ಸತತ 7 ಗಂಟೆಗಳ ಕಾಲ ನಡೆದ ಈ ಗುಂಡಿನ ಕಾಳಗದಲ್ಲಿ ಪಾಕ್ ಪಡೆಗಳು ಭಾರತೀಯ ಸೈನಿಕರತ್ತ ಸುಮಾರು 7000 ಸುತ್ತು ಗುಂಡು ಹಾರಿಸಿದ್ದು, 6 ಸುತ್ತು ಶೆಲ್ ದಾಳಿ ನಡೆಸಿದ್ದರು.
ಪಾಕ್ ಪಡೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ಯೋಧರು ಸುಮಾರು 4595 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಅಲ್ಲದೆ ಆರ್‌ಪಿಜಿ ಲಾಂಚರ್‌ಗಳ ಮೂಲಕ 111 ರಾಕೆಟ್‌ಗಳನ್ನು ಮತ್ತು 18 ಶೆಲ್‌ಗಳನ್ನು ಪಾಕಿಸ್ತಾನ ಪಡೆಗಳತ್ತ ಉಡಾಯಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಕ್ ಪಡೆಯು ಶುಕ್ರವಾರ ದೊಡ್ಡ ಪ್ರಮಾಣದಲ್ಲಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ್ದು, ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.