ಈ ಮಣ್ಣಿನ ಋಣ ತೀರಿಸಲು ಅವಕಾಶ ಕೊಡಿ: ನಟಿ ರಮ್ಯಾ
ಮಂಡ್ಯ: ಲೋಕಸಭಾ ಕ್ಷೇತ್ರ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಟಿ ರಮ್ಯಾ ಅವರು ಸೋಮವಾರ ಮಂಡ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ನಾನು ಈ ಮಣ್ಣಿನ ಮಗಳು, ಹೀಗಾಗಿ ಈ ಮಣ್ಣಿನ ಋಣ ತೀರಿಸಲು ಒಂದು ಅವಕಾಶ ಕೊಡಿ ಎಂದು ಮತಯಾಚಿಸಿದರು.
ಇದೇ ವೇಳೆ, ನಾನು ಚುನಾವಣೆಯಲ್ಲಿ ಸ್ಫರ್ಧಿಸುವುದು ನನ್ನ ತಂದೆಯ ಆಸೆಯಾಗಿತ್ತು. ಅವರ ಆಸೆಯಂತೆ ನಾನು ಚುನಾವಣೆಯಲ್ಲಿ ಸ್ಫರ್ಧಿಸುತ್ತಿದ್ದೇನೆ ಎಂದರು. ಕಳೆದ ವಾರ ರಮ್ಯಾ ಅವರು ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಅವರ ಸಾಕು ತಂದೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಇದರಿಂದಾಗಿ ರಮ್ಯಾ ಕೊಂಚ ದಿನ ಮೌನದಿಂದಿದ್ದರು.
ದಿನ ಕಳೆದಂತೆ ಲೋಕಸಭಾ ಉಪ ಚುನಾವಣೆಗೆ ಪ್ರಚಾರದ ರಂಗೇರುತ್ತಿದ್ದು, ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯದಲ್ಲಿ ಕಾಂಗ್ರೆಸ್ ಹಲವು ಶಾಸಕರು, ಸಚಿವರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ನ ಅಭ್ಯರ್ಥಿಗಳು ತಮ್ಮ ಪ್ರತಿಸ್ಫರ್ಧಿಗಳ ವಿರುದ್ಧ ಆರೋಪ ಪತ್ಯಾರೋಪದಲ್ಲಿ ತೊಡಗಿದ್ದಾರೆ.