ಕಾಶ್ಮೀರದ 8 ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರಿಕೆ, 11 ಮಂದಿ ಬಂಧನ
ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಈದ್ ದಿನದಂದು ಹೊತ್ತಿದ್ದ ಕೋಮು ಗಲಭೆಯ...
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಈದ್-ಉಲ್-ಫಿತರ್ ದಿನದಂದು ಹೊತ್ತಿದ್ದ ಕೋಮು ಗಲಭೆಯ ಕಿಚ್ಚಿನ ಪರಿಣಾಮ ಕಾಶ್ಮೀರದ ಎಂಟು ಜಿಲ್ಲೆಗಳಲ್ಲಿ ಜಾರಿಯಾಗಿದ್ದ ಕರ್ಫ್ಯೂ ಮಂಗಳವಾರವೂ ಮುಂದುವರಿದಿದೆ.
ಈ ಮಧ್ಯೆ ಕಿಶ್ತ್‌ವಾರ್ ಗಲಭೆ ಪ್ರಕರಣ ಸಂಬಂಧ ಇಂದು ಮತ್ತೆ 11 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 140 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕರ್ಫ್ಯೂ ನಡುವೆಯೇ ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾ ಆರಂಭಿಸಲಾಗಿದೆ. ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಒಟ್ಟು 225 ಯಾತ್ರಾರ್ಥಿಗಳಿಗೆ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಾರ್ಥಿಗಳು ಭಾರಿ ಭದ್ರತೆಯೊಂದಿಗೆ ಆರು ಬಸ್ಸು ಹಾಗೂ ಒಂದು ಲಘು ವಾಹನದಲ್ಲಿ ಯಾತ್ರೆಗೆ ತೆರಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಶ್ಮೀರದ ಜಮ್ಮು, ಕುಥ್ವಾ, ಸಾಂಬ, ರೇಸಿ, ಉಧಾಂಪುರ, ರಾಜೋರಿ, ದೊಡಾ ಮತ್ತು ಕಿಶ್ತ್‌ವಾರ್ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕರ್ಫ್ಯೂ ಜಾರಿಯಲ್ಲಿದ್ದು, ಜನತೆ ಮನೆಯಿಂದ ಹೊರಬರದೇ ಭಯದಲ್ಲೇ ಬದುಕುತ್ತಿದ್ದಾರೆ.