ನಕ್ಸಲ್ ದಾಳಿ: ಮೂವರು ಯೋಧರ ಸಾವು
ರಾಯ್ಪುರ: ಛತ್ತೀಸ್ಗಡ ಕೌಸಲನಗರ ಎಂಬಲ್ಲಿ ಮಂಗಳವಾರ ನಕ್ಸಲ್ ಹಾಗೂ ಛತ್ತೀಸ್ಗಡ ಸಶಸ್ತ್ರ ಪಡೆ(ಸಿಎಎಫ್)ಯ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಮೃತಪಟ್ಟಿದ್ದಾರೆ. ಯೋಧರ ಗುಂಡೆಟ್ಟಿಗೆ ಓರ್ವ ನಕ್ಸಲ್ ಸಹ ಬಲಿಯಾಗಿದ್ದಾನೆ.
ಕೌಸಲನಗರದ ಅರಣ್ಯ ಪ್ರದೇಶದಲ್ಲಿ ಇಂದು ಮಧ್ಯಾಹ್ನ ನಕ್ಸಲರು ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಸಿಎಎಫ್ ಯೋಧರು ಸಾವನ್ನಪ್ಪಿದ್ದಾರೆ. ನಕ್ಸಲರ ದಾಳಿಗೆ ಪ್ರತಿ ದಾಳಿ ನಡೆಸಿದ ಯೋಧರ ಗುಂಡಿಗೆ ಓರ್ವ ನಕ್ಸಲ್ ಬಲಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಎಎಫ್ 16 ಬೆಟಾಲಿಯನ್ಗೆ ಸೇರಿದ ಯೋಧರು ಬೆಳಗ್ಗೆಯಿಂದ ನಕ್ಸಲರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದರು. ಇಂದು ಮಧ್ಯಾಹ್ನ ಮಹರಬೆದ ಅರಣ್ಯ ಪ್ರದೇಶದಲ್ಲಿ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರು ದಿಢೀರ್ ದಾಳಿ ನಡೆಸಿದ್ದಾರೆ. ನಕ್ಸಲರು ಯೋಧರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಯೋಧ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ಪೊಲೀಸ ಅಧಿಕಾರಿ ರಾಮ್ನಿವಾಸ್ ತಿಳಿಸಿದ್ದಾರೆ.
ಇದೇ ವೇಳೆ, ದಾಳಿಯಲ್ಲಿ ಮೃತಪಟ್ಟಿರುವ ಓರ್ವ ನಕ್ಸಲನ ದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಮ್ನಿವಾಸ್ ಧೃಡಪಡಿಸಿದ್ದಾರೆ. ಅಲ್ಲದೆ ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಯೋಧರನ್ನು ಕಳುಹಿಸಿಲಾಗಿದ್ದು, ನಕ್ಸಲರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.