ಪಾಕ್ ಪ್ರತಿಕ್ರಿಯೆ ನೀಡುವವರೆಗು ಮಾತುಕತೆ ಇಲ್ಲ: ಸೈಯದ್
ಭಾರತೀಯ ಯೋಧರ ಹತ್ಯೆ ಕುರಿತಂತೆ ಮೊದಲು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದ ನಂತರ ಮಾತುಕತೆ ನಡೆಸುವ...
ನವದೆಹಲಿ: ಭಾರತೀಯ ಯೋಧರ ಹತ್ಯೆ ಕುರಿತಂತೆ ಮೊದಲು ಪಾಕಿಸ್ತಾನ ಪ್ರತಿಕ್ರಿಯೆ ನೀಡಿದ ನಂತರ ಮಾತುಕತೆ ನಡೆಸುವ ಕುರಿತು ತೀರ್ಮಾನಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಸೈಯದ್ ಅಕ್ಬರುದ್ದೀನ್ ಮಂಗಳವಾರ ತಿಳಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಪಾಕಿಸ್ತಾನ ಹಾಗೂ ಭಾರತ ನಡುವೆ ಬಾಂಧವ್ಯ ವೃದ್ಧಿಸಿಕೊಳ್ಳುವ ಸಂಬಂಧ ಮಾತುಕತೆ ನಡೆಸಲು ಭಾರತವನ್ನು ಆಹ್ವಾನಿಸಿದ್ದರು. ಈ ಸಂಬಂಧ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪ್ರಧಾನಿ ಷರೀಫ್ ಅವರೊಂದಿಗೆ ಮಾತುಕತೆಗೆ ಭಾರತ ಮುಕ್ತ ಆಹ್ವಾನ ನೀಡುತ್ತದೆ. ಆದರೆ ಪಾಕಿಸ್ತಾನ ಮೊದಲು ಭಾರತೀಯ ಯೋಧರ ಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಲಿ ಆ ನಂತರ ಮಾತುಕತೆಗೆ ನಾವು ಸಿದ್ಧ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಲು ಭಾರತ ಸಹ ಬಯಸಿದೆ. ಈ ಸಂಬಂಧ ಮಾತುಕತೆಗಳು ನಡೆಯಬೇಕಾದರೆ ಮೊದಲಿಗೆ ಪಾಕಿಸ್ತಾನ ಯೋಧರ ಹತ್ಯೆಗೆ ಸಂಬಂಧಿಸಿದಂತೆ ವಿವರಣೆ ನೀಡಲಿ ಎಂದು ಸೈಯದ್ ಆಗ್ರಹಿಸಿದರು. ಅಲ್ಲದೆ ಯೋಧರ ಹತ್ಯೆ ಬಗ್ಗೆ ವಿವರಣೆ ನೀಡುವವರೆಗೂ ಪಾಕ್ ಜೊತೆಗಿನ ಮಾತುಕತೆಗೆ ಸ್ವಂದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಅಪ್ರಚೋದಿತ ದಾಳಿಗೆ ಮುಂದಾಗುತ್ತಿರುವ ಪಾಕಿಸ್ತಾನ ತನ್ನ ಸೈನಿಕರಿಗೆ ಕಡಿವಾಣ ಹಾಕಬೇಕು. ಗಡಿ ಭಾಗದಲ್ಲಿ ಪಾಕಿಸ್ತಾನ ಸೈನಿಕರು ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ 26/11ರ ಮುಂಬೈ ಮೇಲಿನ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.