ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೇವು ಹಗರಣ: ಸುಪ್ರೀಂನಲ್ಲಿ ಲಾಲು ಅರ್ಜಿ ವಜಾ

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ..

Lingaraj Badiger
Updated On : 13 Aug 2013, 2:02 am

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ಮೇವು ಹಗರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಧೀಶರ ವರ್ಗಾವಣೆ ಕೋರಿ ಲಾಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅಲ್ಲದೆ ಅದಷ್ಟು ಬೇಗ ಪ್ರಕರಣದ ತೀರ್ಪು ಪ್ರಕಟಿಸುವಂತೆ ವಿಚಾರಣೆ ನಡೆಸುತ್ತಿರುವ ಜಾರ್ಖಂಡ್‌ನ ಸಿಬಿಐ ವಿಶೇಷ ಕೋರ್ಟ್‌ಗೆ ಸೂಚಿಸಿದೆ.

ಸಿಬಿಐ ವಿಶೇಷ ಕೋರ್ಟ್‌ನ ನ್ಯಾಯಾಧೀಶರು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಸರ್ಕಾರದಲ್ಲಿರುವ ಮಂತ್ರಿಯೊಬ್ಬರ ಸಂಬಂಧಿಯಾಗಿದ್ದಾರೆ ಎಂಬ ಲಾಲು ಆರೋಪವನ್ನು ತಳ್ಳಿಹಾಕಿದ ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರ ನೇತೃತ್ವದ ಸುಪ್ರೀಂ ಪೀಠ, ನ್ಯಾಯಾಧೀಶರ ಮೇಲಿನ ಆರೋಪ ಪೂರ್ವಗ್ರಹಪೀಡಿತವಾಗಿದೆ ಮತ್ತು ವಿಚಾರಣೆ ಅಂತಿಮಘಟ್ಟದಲ್ಲಿರುವ ಈ ಸಂದರ್ಭದಲ್ಲಿ ಪ್ರಶ್ನಿಸಿದ್ದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಸಿಬಿಐ ಕೋರ್ಟ್ ತೀರ್ಪಿಗೆ ತಾನು ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಸುಪ್ರೀಂ ಕೋರ್ಟ್, ವಿಚಾರಣ ಅಂತಿಮಗೊಳಿಸಲು ಸಿಬಿಐಗೆ ಐದು ದಿನ ಹಾಗೂ ಆರೋಪಿಗಳ ಪರ ವಾದ ಮಂಡಿಸಲು 15 ದಿನ ಗಡುವು ನೀಡಿದೆ.

ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯ ಜುಲೈ 15 ರಂದು ಮೇವು ಹಗರಣದ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ ಸಿಬಿಐ ನ್ಯಾಯಾಧೀಶರು ಬಿಹಾರದ ನಿತೀಶ್ ಕುಮಾರ್ ಸರ್ಕಾರದ ಶಿಕ್ಷಣ ಮಂತ್ರಿಯ ಸಂಬಂಧಿಯಾಗಿದ್ದಾರೆ. ಇವರು ಪಕ್ಷಪಾತ ಧೋರಣೆ ಅನುಸರಿಸಿ ತೀರ್ಪು ನೀಡಬಹುದಾಗಿದೆ. ಹೀಗಾಗಿ ಬೇರೊಂದು ಪೀಠಕ್ಕೆ ವರ್ಗಾಯಿಸಬೇಕು ಎಂದು ಲಾಲು ಮನವಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement