ಸಲಿಂಗಕಾಮ ಪ್ರಕರಣ: ಮಾಜಿ ಸಚಿವ ರಾಘವ್‌ಜಿಗೆ ಜಾಮೀನು
ಭೂಪಾಲ್: ಸಲಿಂಗಕಾಮ ಪ್ರಕರಣದ ಆರೋಪದ ಮೇಲೆ ಜೈಲು ಸೇರಿದ್ದ ಮಧ್ಯಪ್ರದೇಶ ಮಾಜಿ ಹಣಕಾಸು ಸಚಿವ ರಾಘವ್‌ಜಿ ಅವರು ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಸೇವಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ರಾಘವ್‌ಜಿ(79) ಅವರು, ಕಳೆದ 30 ದಿನಗಳಿಂದ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದರು. ರಾಘವ್‌ಜಿ ಅವರಿಗೆ ವಯಸ್ಸಾಗಿದ್ದು, ಆರೋಗ್ಯ ಪರಿಸ್ಥಿತಿಯ ಕಾರಣದಿಂದಾಗಿ ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ಜಾಮೀನು ನೀಡಿತ್ತು.
ನ್ಯಾಯಾಲಯದ ನಿಯಮದಂತೆ ಕೆಲವೊಂದು ಔಪಚಾರಿಕ ವಿಧಿಗಳನ್ನು ಪೂರ್ಣಗೊಳಿಸಿದ ರಾಘವ್‌ಜೀ ಅವರನ್ನು ಇಂದು ಮಧ್ಯಾಹ್ನ ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಪಾಂಡೆ ಅವರು ತಿಳಿಸಿದ್ದಾರೆ.
ಕಾರಗೃಹದಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಘವ್‌ಜಿ ಅವರು, ಪಕ್ಷ ಸಮ್ಮತಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ ಎಂದರು.
ರಾಜ್‌ಕುಮಾರ್ ದಂಗಿ ಎಂಬಾತ ರಾಘವ್‌ಜಿ ಅವರ ಮನೆಯಲ್ಲಿ ಮೂರ್ನಾಲ್ಕು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದು, ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಸಚಿವರು ತನ್ನನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದರು ಎಂದು ದೂರು ನೀಡಿದ್ದನು. ಹೀಗಾಗಿ ಜುಲೈ 9 ರಂದು ಪೊಲೀಸರು ಬಂಧಿಸಿದ್ದರು.