ಪರಸ್ಪರ ಟೀಕೆ ಮಾಡುವ ದಿನ ಇದಲ್ಲ: ಆಡ್ವಾಣಿ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ..
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಭಾಷಣವನ್ನು ಟೀಕಿಸಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು, ಇಂದು ಸ್ವಾತಂತ್ರ್ಯೋತ್ಸವ ದಿನ. ಇದು ನಾಯಕರು ಪರಸ್ಪರ ಟೀಕೆ ಮಾಡುವಂತಹ ದಿನ ಅಲ್ಲ ಎಂದು ಹೇಳಿದ್ದಾರೆ.
67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ತಮ್ಮ ನಿವಾಸದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಆಡ್ವಾಣಿ, ಇವತ್ತು ಸ್ವಾತಂತ್ರ್ಯ ದಿನ. ಈ ದಿನ ಒಬ್ಬರನ್ನೊಬ್ಬರು ಟೀಕಿಸುವುದು ಸರಿಯಲ್ಲ. ಜನತೆಗೆ ಈ ದಿನದ ಮಹತ್ವ ಗೊತ್ತು ಎಂದು ಹೇಳಿದರು.
ಇಂದು ಬೆಳಗ್ಗೆ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಭಾಷಣವನ್ನು ಮೋದಿ ಕಟುವಾಗಿ ಟೀಕಿಸಿದ್ದರು. ಅವರ ಭಾಷಣ ನನಗೆ ಮಾತ್ರವಲ್ಲ ಇಡೀ ದೇಶಕ್ಕೆ ತೀವ್ರ ನಿರಾಸೆಯುಂಟು ಮಾಡಿದೆ ಎಂದಿದ್ದರು. ಇದಕ್ಕೆ ಧ್ವನಿಗೂಡಿಸಿದ್ದ ಕೆಲವು ಬಿಜೆಪಿ ನಾಯಕರು ಸಹ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.