ಮತ್ತೆ ಗಡಿಯಲ್ಲಿ ಗುಂಡಿನ ಕಾಳಗ: 3 ಯೋಧರಿಗೆ ಗಾಯ
ಶ್ರೀನಗರ: ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಸೈನಿಕರು ಮತ್ತೆ ಗುರುವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಎಂಬಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಸ್ಥಳೀಯ ನಿವಾಸಿ ಸೇರಿದಂತೆ, ಮೂವರು ಯೋಧರು ಗಾಯಗೊಂಡಿದ್ದಾರೆ.
ಪೂಂಚ್ ಜಿಲ್ಲೆಯ ಬಾಲಕೋಟ್ ಎಂಬಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ಪಾಕಿಸ್ಥಾನಿ ಸೈನಿಕರು ಭಾರತೀಯ ಸೇನಾ ನೆಲೆಗಳ ಹಾಗೂ ಸಾರ್ವಜನಿಕ ಪ್ರದೇಶಗಳ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪಾಕಿಸ್ತಾನಿ ಸೈನಿಕರ ದಾಳಿಗೆ ಪ್ರತಿದಾಳಿ ನಡೆಸಿದ ಸಂದರ್ಭದಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿರುವ ಸ್ಥಳೀಯ ನಿವಾಸಿ ಪರ್ವೈಝ್ ನನ್ನು ಕೂಡಲೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಆತನನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ
ಪಾಕಿಸ್ತಾನ ಸೈನಿಕರು ಸಣ್ಣ ಪ್ರಮಾಣದ ಫಿರಂಗಿ ಹಾಗೂ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಉಭಯ ದೇಶಗಳ ನಡುವೆ ಬೆಳಿಗ್ಗಿನಿಂದ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ.
ನಿನ್ನೆಯಷ್ಟೆ ಸಂಸತ್ತಿನ ಉಭಯ ಸದನಗಳಲ್ಲಿ ಪಾಕಿಸ್ತಾನ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರವಾಗಿತ್ತು. ಆದರು ಪಾಕಿಸ್ತಾನ ಸೈನಿಕರು ಇಂದು ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ್ದಾರೆ. ಕಳೆದ 5 ದಿನಗಳಲ್ಲಿ 10 ಬಾರಿ ಕದನ ವಿರಾಮ ಉಲ್ಲಂಘಿಸಿರುವ ಪಾಕ್ ಸೈನಿಕರು ಭಾರತೀಯ ಯೋಧರ ಮೇಲೆ ಆಪ್ರಚೋದಿತ ದಾಳಿ ನಡೆಸುತ್ತಿದ್ದಾರೆ.