ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂಕುಚಿತ, ಪಂಥೀಯ ಸಿದ್ಧಾಂತಗಳಿಂದ ಅಭಿವೃದ್ಧಿ ಕುಂಟಿತ: ಪ್ರಧಾನಿ

ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸಂಕುಚಿತ ಮನೋಭಾವ ಮತ್ತು ಪಂಥೀಯ ಸಿದ್ಧಾಂತಗಳಿಂದ ದೇಶದ ಅಭಿವೃದ್ಧಿ ಕುಂಟಿತವಾಗಲಿದೆ.

Vishwanath S
Updated On : 15 Aug 2013, 3:20 am

ನವದೆಹಲಿ: ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸಂಕುಚಿತ ಮನೋಭಾವ ಮತ್ತು ಪಂಥೀಯ ಸಿದ್ಧಾಂತಗಳಿಂದ ದೇಶದ ಅಭಿವೃದ್ಧಿ ಕುಂಟಿತವಾಗಲಿದೆ. ಹೀಗಾಗಿ ಅವುಗಳ ಬೆಳವಣೆಗೆಯನ್ನು ತಡೆಗಟ್ಟುವ ಅಗತ್ಯವಿದೆ ಎಂದು ಪರೋಕ್ಷವಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಹರಿಹಾಯ್ದಿದ್ದಾರೆ.

ಇಂದು ಕೆಂಪುಕೋಟೆಯಲ್ಲಿ 67 ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಮಾಡಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕಳೆದ ಹತ್ತು ವರ್ಷಗಳಲ್ಲಿನ ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಆಧುನಿಕ ಅಭಿವೃದ್ಧಿ ಮತ್ತು ಜಾತ್ಯತೀತ ರಾಷ್ಟ್ರದಲ್ಲಿ ಸಂಕುಚಿತ ಮನೋಭಾವಕ್ಕೆ ಹಾಗೂ ಪಂಥೀಯ ಸಿದ್ಧಾಂತಗಳಿಗೆ ಸ್ಥಾನವಿಲ್ಲ ಎಂದರು.

ಪ್ರಧಾನಿ ಭಾಷಣದ ಮುಖ್ಯಾಂಶಗಳು:

*ಗಡಿಯಲ್ಲಿ ಪಾಕಿಸ್ತಾನ ಸೈನಿಕರಿಂದ ಭಾರತೀಯ ಯೋಧರ ಹತ್ಯೆಯನ್ನು ಖಂಡಿಸಿದ ಪ್ರಧಾನಿ, ಭಾರತೀಯ ಸೈನಿಕರ ಮೇಲಿನ ಅಪ್ರಚೋದಿತ ದಾಳಿಗಳನ್ನು ನಿಯಂತ್ರಿಸದಿದ್ದರೆ ಪಾಕಿಸ್ತಾನ ಜತೆ ಉತ್ತಮ ಬಾಂಧವ್ಯ ಸಾಧ್ಯವಾಗುವುದಿಲ್ಲ. ಅಲ್ಲದೆ ಪಾಕ್ ಜತೆ ಸಂಬಂಧ ಸುಧಾರಣೆಯಾಗಬೇಕಿದ್ದರೆ ಭಾರತ ವಿರೋಧಿ ಚಟುವಟಿಕೆಗಳಿಗೆ ಪಾಕ್ ಕಡಿವಾಣ ಹಾಕಬೇಕು ಎಂದರು.

*ದೇಶದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಬಡತನ ಸಮಸ್ಯೆ ನಿವಾರಣೆಗೆ ಆದ್ಯೆತೆ,  ಬಡ ಮಕ್ಕಳ ಶಿಕ್ಷಣಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

*ಐಎನ್‌ಎಸ್ ಸಿಂಧು ರಕ್ಷಕ್ ಜಲಾಂತರ್ಗಾಮಿ ನೌಕೆಯ ಸ್ಫೋಟ ಮತ್ತು 18 ಸಿಬ್ಬಂದಿ ಸಾವಿಗೆ ಪ್ರಧಾನಿ ಸಂತಾಪ ಸೂಚಿಸಿದರು.

*ನಕ್ಸಲರ ದಾಳಿಗಳನ್ನು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಶ್ವಸಿಯಾಗಿತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

*ಇಡೀ ದೇಶ ನಿಮ್ಮೊಂದಿಗಿದೆ ಎಂದು ಪ್ರಧಾನಿ ಉತ್ತರಖಂಡದ ಪ್ರವಾಹ ಪೀಡಿತ ಜನತಗೆ ಸಾಂತ್ವನ ಹೇಳಿದರು. ಅಲ್ಲದೆ ಪುನರ್ವಸತಿ ಕಲ್ಪಿಸುವ ಬಗ್ಗೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

*ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ರಸ್ತೆ, ರೈಲ್ವೇ, ವಿದ್ಯುತ್, ನಾಗರಿಕ ವಿಮಾನಯಾನ, ಬಂದರು ಮತ್ತು ದೂರಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಕಲ್ಲಿದ್ದಲಿನ ಪೂರೈಕೆಯ ಕೊರತೆಯಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಸಾಧಿಸಲು ಸಾಧ್ಯವಾಗಿಲ್ಲ. ಆದರೂ ವಿದ್ಯುತ್ ಸಮಸ್ಯೆ ನಿವಾರಣೆಗೆ ಯತ್ನಿಸಲಾಗಿದೆ ಎಂದರು.

*ನವೀನ ಕೌಶಲ್ಯಗಳನ್ನು ಯಶಸ್ವಿಯಾಗಿ ಮೈಗೂಡಿಸಿಕೊಂಡ ಯುವಜನತೆಗೆ 10 ಸಾವಿರ ರು. ಅನುಧಾನ ನೀಡಲಾಗುತ್ತದೆ. ಈ ಯೋಜನೆಯಿಂದ ಮುಂದಿನ 1 ವರ್ಷದಲ್ಲಿ 10 ಲಕ್ಷ ಯುವ ಜನಾಂಗಕ್ಕೆ ಪ್ರಯೋಜನವಾಗಲಿದೆ.

*ದೇಶದ ಪ್ರತಿಯೊಬ್ಬ ಪ್ರಜೆಗೂ ಆಹಾರ ಭದ್ರತೆ ಹೊದಗಿಸುವ ಆಹಾರ ಭದ್ರತಾ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರ ದೊರೆಯುವ ವಿಶ್ವಾಸವಿದೆ. ಸಾರ್ವಜನಿಕ ಪೂರೈಕೆ ವ್ಯವಸ್ಥೆ(ಪಿಡಿಎಸ್) ಕಂಪೂಟರೀಕರಣಕ್ಕೆ ಕಾರ್ಯಕಲ್ಪ.

*ಬಿಹಾರದ ಬಿಸಿ ಊಟ ದುರಂತ ದುರಾದೃಷ್ಟಕರ. ಇಂತಹ ಘಟನೆ ಬೇರೆಲ್ಲೂ ಸಂಭವಿಸಬಾರದು. ಆಹಾರ ಪೋಷಕಾಂಶಯುಕ್ತವಾಗಿರಬೇಕು ಮತ್ತು ಸ್ವಚ್ಛ ವಾತಾವರಣದಲ್ಲಿ ತಯಾರಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement