ದಾವೂದ್ ಆಪ್ತ, ಎಲ್‌ಇಟಿ ಉಗ್ರ ತುಂಡಾ ಬಂಧನ
ಭಾರತಕ್ಕೆ ಬೇಕಾಗಿದ್ದ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಹಾಗೂ ಲಷ್ಕರ್-ಇ-ತೋಯ್ಬಾ..
ನವದೆಹಲಿ: ಭಾರತಕ್ಕೆ ಬೇಕಾಗಿದ್ದ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಹಾಗೂ ಲಷ್ಕರ್-ಇ-ತೋಯ್ಬಾ (ಎಲ್‌ಇಟಿ)ಸಂಘಟನೆಯ ಉಗ್ರ ಸೈಯಿದ್ ಅಬ್ದುಲ್ ಕರೀಂ ಅಲಿಯಾಸ್ ತುಂಡಾನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಎಲ್‌ಇಟಿ ಉಗ್ರ ಸಂಘಟನೆಯಲ್ಲಿ ಬಾಂಬ್ ಎಕ್ಸಪರ್ಟ್ ಆಗಿದ್ದ 70 ವರ್ಷದ ತುಂಡಾನನ್ನು ದೆಹಲಿ ಪೊಲೀಸರು ಇಂದು ಭಾರತ-ನೇಪಾಳ ಗಂಡಿಯಲ್ಲಿ ಬಂಧಿಸಿದ್ದು, ಮಧ್ಯಾಹ್ನದ ನಂತರ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಾಂಬ್ ಎಕ್ಸಪರ್ಟ್ ಆಗಿರುವ ತುಂಡಾ, ಮುಂಬೈ ದಾಳಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ.
2001ರ ಸಂಸತ್ ದಾಳಿಯ ನಂತರ ಭಾರತ ಪಾಕಿಸ್ತಾನಕ್ಕೆ ಸಲ್ಲಿಸಿದ್ದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ತುಂಡಾನ ಹೆಸರಿದೆ. ಅಲ್ಲದೆ ಮುಂಬೈ, ದೆಹಲಿ ಹಾಗೂ ಹೈದರಾಬಾದ್ ನಗರಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲೂ ತುಂಡಾ ಭಾಗಿಯಾಗಿದ್ದಾನೆ ಎಂದು ಭಾರತ ಆರೋಪಿಸಿದೆ.
ಮೂಲತಃ ಉತ್ತರ ಪ್ರದೇಶದವನಾಗಿರುವ ತುಂಡಾ, 1980ರಲ್ಲಿ ಪಾಕಿಸ್ತಾನದ ಐಎಸ್‌ಐ ಸಂಪರ್ಕಕ್ಕೆ ಬಂದು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ.