ಜಿಎಸ್‌ಎಲ್‌ವಿ-ಡಿ5 ಉಡಾವಣೆ ಸ್ಥಗಿತ
ನವದೆಹಲಿ: ತಾಂತ್ರಿಕ ದೋಷದಿಂದಾಗ ಜಿಎಸ್‌ಎಲ್‌ವಿ-ಡಿ5 ಉಡಾವಣೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.
ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಲಾಗಿರುವ ಜಿಎಸ್‌ಎಲ್‌ವಿ-5ಡಿ ರಾಕೆಟ್ ಉಡಾವಣೆ ಮಾಡಲು ಕ್ಷಣಗಣನೆ ಇರಬೇಕಾದರೆ ರಾಕೆಟ್‌ನಲ್ಲಿ ಇಂಧನ ಸೋರಿಕೆ ಕಂಡು ಬಂದ ಹಿನ್ನಲೆಯಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದೆ.
ಸಂಜೆ 4.50ರಲ್ಲಿ ಉಡಾವಣೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಾಕೆಟ್‌ನಲ್ಲಿ ಇಂಧನ ಸೋರಿಕೆಯಾಗುತ್ತಿರುವ ಕಂಡುಬಂದಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 1,982 ಕೆ.ಜಿ ತೂಕದ ಉಪಗ್ರಹ ಹೊತ್ತಿರುವ 49.13 ಮೀಟರ್ ಉದ್ದದ ರಾಕೆಟ್ ಬಾನಂಗಳಕ್ಕೆ ಜಿಗಿಯಬೇಕಿತ್ತು.
ರಾಕೆಟ್‌ನಲ್ಲಿ ಇಂಧನ ಸೋರಿಕೆಯಾದ ಹಿನ್ನಲೆಯಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಜಿಎಸ್‌ಎಲ್‌ವಿ-ಡಿ5 ಉಡಾವಣೆ ಮಾಡವ ನೂತನ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್ ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ಕ್ರಯೋಜೆನಿಕ್ ಎಂಜಿನ್ ಹೊಂದಿದ್ದ ರಾಕೆಟ್ ಉಡಾವಣೆ ವಿಫಲಗೊಂಡಿತ್ತು. ಇಂದು ಆಗ ಬೇಕಿದ್ದ ರಾಕೆಟ್ ಉಡಾವಣೆ ಹೆಚ್ಚು ಜನರ ಮಹತ್ವದಾಗಿತ್ತು. ಆದರೆ ಇಂಧನ ಸೋರಿಕೆಯಿಂದಾಗಿ ಈ ಬಾರಿಯ ಪ್ರಯತ್ನವೂ ವಿಫಲವಾದಂತೆ ಮೇಲ್ನೋಟಕ್ಕೆ ಕಂಡುಬಂದಿದೆ.