ಲೋಕಸಭೆ ಉಪ ಸಮರಕ್ಕೆ ಮಂಡ್ಯ ಜಿಲ್ಲಾಡಳಿತ ಸಿದ್ಧ
ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ..
ಮಂಡ್ಯ: ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 1975 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದರಲ್ಲಿ 230 ಅತಿ ಸೂಕ್ಷ್ಮ, 380 ಸೂಕ್ಷ್ಮ ಹಾಗೂ 1,364 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರು ಹೇಳಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರ ಒಟ್ಟು 16, 18,142 ಮತದಾರರನ್ನು ಹೊಂದಿದೆ. ಈ ಪೈಕಿ 8,15,363 ಪುರುಷ ಹಾಗೂ 8,02,779 ಮಹಿಳಾ ಮತದಾರರಿದ್ದಾರೆ.
ವಿವಿಧ ಪಕ್ಷಗಳ 9 ಅಭ್ಯರ್ಥಿಗಳು ಮಂಡ್ಯ ಲೋಕಸಭಾ ಉಪ ಚುನಾವಣಾ ಕಣದಲ್ಲಿದ್ದಾರೆ ಎಂದು ಕೃಷ್ಣಯ್ಯ ಅವರು ತಿಳಿಸಿದ್ದಾರೆ.
ಇನ್ನು ಚುನಾವಣೆ ಭದ್ರತೆಗಾಗಿ 7 ಅರೆ ಸೇನಾಪಡೆ ಹಾಗೂ 30 ಕೆಎಸ್ಆರ್ಪಿ ಪಡೆ ನಿಯೋಜಿಸಲಾಗಿದೆ. ಅಲ್ಲದೆ 30ಫ್ಲೈಯಿಂಗ್ ಸ್ಕ್ವಾಡ್, 32 ಸ್ಥಿರ ಜಾಗೃತ ತಂಡ ರಚಿಸಲಾಗಿದ್ದು, ಹೆಚ್ಚಿನ ಭದ್ರತೆಗಾಗಿ ಇತರೆ ಜಿಲ್ಲೆಗಳಿಂದ 1 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಅವರು ತಿಳಿಸಿದ್ದಾರೆ.
ತೀರಾ ವೈಯಕ್ತಿಕ ಟೀಕೆಗಳಿಗೆ ವೇದಿಕೆಯಾದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಪ್ರಚಾರಕ್ಕೆ ಇಂದು ಸಂಜೆ 5 ಗಂಟೆಗೆ ತೆರೆ ಬೀಳಲಿದೆ. 21ಕ್ಕೆ ಚುನಾವಣೆ ನಡೆಯಲಿದೆ.
ಈ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ಗೆ ಪ್ರತಿಷ್ಠೆಯಾಗಿದ್ದು, ಎರಡೂ ಪಕ್ಷಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಅಂಬರೀಷ್, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು, ಪ್ರಮುಖ ನಾಯಕರು ಕಾಂಗ್ರೆಸ್ ಅಭ್ಯರ್ಥಿ ರಮ್ಯ ಹಾಗೂ ಡಿ.ಕೆ.ಸುರೇಶ್ ಅವರ ಗೆಲವಿಗೆ ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಅದೇ ವೇಳೆ, ಜೆಡಿಎಸ್ನ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಗಳ ಗೆಲವಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ.