'ಸಿದ್ದರಾಮಣ್ಣ ಕಾಂಗ್ರೆಸ್ನ ಮೋದಿ': ಸಚಿವ ಅಂಬರೀಷ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹೋಲಿಸಿರುವ ವಸತಿ..
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹೋಲಿಸಿರುವ ವಸತಿ ಸಚಿವ ಅಂಬರೀಷ್ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ಮೋದಿ ಎಂದು ಸೋಮವಾರ ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅಂಬಿ, ಸಿದ್ದು ಅವರನ್ನು ಮೋದಿಗೆ ಹೋಲಿಕೆ ಮಾಡುವ ಮೂಲಕ ಪರೋಕ್ಷವಾಗಿ ನರೇಂದ್ರ ಮೋದಿಯನ್ನು ಗುಣಗಾನ ಮಾಡಿದ್ದಾರೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಸಚಿವ ಬಾಬುರಾವ್ ಚಿಂಚನಸೂರು ಹಾಗೂ ಆತ್ಮಾನಂದ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲೇ ಅಂಬರೀಷ್ ಈ ಡೈಲಾಗ್ ಹೊಡೆದಿದ್ದಾರೆ.
ನಮ್ಮಲ್ಲಿಯೂ ಒಬ್ಬ ಮೋದಿ ಇದ್ದಾರೆ. ಮೋದಿಯಿಂದ ಬಿಜೆಪಿಗೆ ಹೇಗೆ ಇಮೇಜ್ ಬಂದಿದೆಯೇ, ಹಾಗೆಯೇ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ಗೆ ಇಮೇಜ್ ಬಂದಿದೆ ಎಂದು ಸಚಿವ ಅಂಬರೀಷ್ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದರು. ಅಲ್ಲದೇ ಸಿದ್ದು ಅವರನ್ನು ಮೋದಿಯಂತೆ ರಾಷ್ಟ್ರ ಸುತ್ತಿಸುವೆ ಎಂದು ಹೇಳಿದ್ದಾರೆ.
ಮೋದಿ ಜ್ವರ ರಾಜ್ಯ ಕಾಂಗ್ರೆಸ್ಗೂ ತಲುಪಿದೆ: ಬಿಜೆಪಿ
ಇನ್ನು ಅಂಬರೀಷ್ ಹೇಳಿಕೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ರಘುನಾಥ್ ರಾವ್ ಮಲ್ಕಾಪುರೆ ಅವರು, ಮೋದಿ ಜ್ವರ ರಾಜ್ಯ ಕಾಂಗ್ರೆಸ್ಗೂ ತಲುಪಿದೆ ಎಂದಿದ್ದಾರೆ.