ಕಲ್ಲಿದ್ದಲು ಹಗರಣದ ಫೈಲ್ ಕಾಣೆಯಾಗಿರುವ ಬಗ್ಗೆ ಪ್ರಧಾನಿ ಉತ್ತರಿಸಲಿ: ಬಿಜೆಪಿ
ಕಲ್ಲಿದ್ದಲು ಹಗರಣದ ಫೈಲ್‌ಗಳು ಕಾಣೆಯಾಗಿರುವುದರ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ಈ ಬಗ್ಗೆ ಪ್ರಧಾನಿ...
ನವದೆಹಲಿ: ಕಲ್ಲಿದ್ದಲು ಹಗರಣದ ಫೈಲ್‌ಗಳು ಕಾಣೆಯಾಗಿರುವುದರ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ಈ ಬಗ್ಗೆ ಪ್ರಧಾನಿ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದೆ.
ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಲೋಕಸಭಾ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಪ್ರಧಾನಿ ಮನಮೋಹನ ಸಿಂಗ್ ಫೈಲ್ ಕಾಣೆಯಾಗಿರುವುದರ ಬಗ್ಗೆ ಸ್ಪಷ್ಟನೆ ನೀಡಲಿ. ಮಾತ್ರವಲ್ಲದೆ ಕಾಣೆಯಾಗಿರುವ ಫೈಲ್‌ಗಳನ್ನು ಪತ್ತೆ ಹಚ್ಚಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ವಿವರಿಸಲಿ ಎಂದಿದ್ದಾರೆ.
ಕಾಣೆಯಾದ ಫೈಲ್‌ಗಳ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡುವ ವರೆಗೂ ನಾವು ಲೋಕಸಭಾ ಕಲಾಪ ಮುಂದುವರಿಯಲು ಬಿಡುವುದಿಲ್ಲ ಎಂದು ಸುಷ್ಮಾ ಎಚ್ಚರಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಅವರು ಕಾಣೆಯಾಗಿರುವ ಫೈಲ್‌ಗಳ ವಿಷಯ ಪ್ರಸ್ತಾಪಿಸಿ, ಕಲ್ಲಿದ್ದಲು ಸಚಿವ ಜೈಪ್ರಕಾಶ್ ಜೈಸ್ವಾಲ್ ಅಲ್ಲ, ಮನಮೋಹನ್ ಸಿಂಗ್ ಅವರೇ ಇದಕ್ಕೆ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳವಾರವೂ ಲೋಕಸಭೆಯಲ್ಲಿ ಸಂಸದರು ಪ್ರಧಾನಮಂತ್ರಿ ಉತ್ತರಿಸಲಿ ಎಂಬ ಘೋಷಣೆ ಕೂಗಿ ಗದ್ದಲವೆಬ್ಬಿಸಿ ಕಲಾಪಕ್ಕೆ ತಡೆಯುಂಟು ಮಾಡಿದ್ದಾರೆ.