ದೆಹಲಿಯಲ್ಲಿ ಆಹಾರ ಭದ್ರತಾ ಯೋಜನೆಗೆ ಸೋನಿಯಾ ಚಾಲನೆ
ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಯೋಜನೆಗೆ ಯುಪಿಎ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ..
ನವದೆಹಲಿ: ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಯೋಜನೆಗೆ ಯುಪಿಎ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಚಾಲನೆ ನೀಡಿದ್ದು, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಇಂದಿನಿಂದಲೇ ಜಾರಿಗೆ ಬರಲಿದೆ.
ಮಾಜಿ ಪ್ರಧಾನಿ, ದಿ.ರಾಜೀವ್ ಗಾಂಧಿ ಅವರ 69ನೇ ಜನ್ಮ ದಿನವಾದ ಇಂದು ಮಹಿಳೆಯೊಬ್ಬರಿಗೆ ಆಹಾರ ಧಾನ್ಯ ವಿತರಿಸುವ ಮೂಲಕ ಆಹಾರ ಭದ್ರತಾ ಯೋಜನೆಗೆ ಸೋನಿಯಾ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸೋನಿಯಾ, ದೇಶದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಹೇಳಿದರು.
ಈ ಯೋಜನೆ ರಾಜೀವ್ ಗಾಂಧಿ ಅವರ ಕನಸಾಗಿತ್ತು. ಹೀಗಾಗಿಯೇ ಅವರ ಜನ್ಮದಿನದಂದೇ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಸೋನಿಯಾ ತಿಳಿಸಿದರು.
ಸುಮಾರು 80 ಕೋಟಿ ಜನ ಈ ಯೋಜನೆಯ ಲಾಭ ಪಡೆಯಲಿದ್ದು, ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗುವುದು ಎಂದು ಸೋನಿಯಾ ಭರವಸೆ ನೀಡಿದರು.