ರುಪಾಯಿ ಮೌಲ್ಯ ಕುಸಿತಕ್ಕೆ ಕೇಂದ್ರ ಸರ್ಕಾರ ಹೊಣೆ: ಮೋದಿ
ಗಾಂಧಿನಗರ: ಡಾಲರ್ ಮುಂದೆ ರುಪಾಯಿ ಮೌಲ್ಯ ಕುಸಿತದ ಬಗ್ಗೆ ಹಾಗೂ ದೇಶದ ಭದ್ರತೆ ಬಗ್ಗೆ ಯುಪಿಎ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಂಗಳವಾರ ಆಪಾದಿಸಿದ್ದಾರೆ.
ದಿನದಿಂದ ದಿನಕ್ಕೆ ಡಾಲರ್ ಮುಂದೆ ರುಪಾಯಿ ಮೌಲ್ಯ ಕುಸಿಯುತ್ತಿದೆ. ಮತ್ತೊಂದೆಡೆ ದೇಶಕ್ಕೆ ಬಿಗಿ ಭದ್ರತೆ ಇಲ್ಲದೆ ಕಿಡಿಗೇಡಿಗಳು ಭಾರತದೊಳಗೆ ನುಸುಳುತ್ತಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಮಾತ್ರ ಇದ್ಯಾವುದು ತಮ್ಮ ಗಮನಕ್ಕೆ ಬಂದಿಲ್ಲ ಎಂಬುವಂತೆ ನಟಿಸುತ್ತಿದೆ ಎಂದು ಮೋದಿ ದೂರಿದ್ದಾರೆ.
ರುಪಾಯಿ ಮೌಲ್ಯ ಕುಸಿತಕ್ಕೆ ಹಾಗೂ ಬಿಗಿ ಭದ್ರತೆ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಮುಖ ನಾಯಕರು ಮೌನವಾಗಿದ್ದಾರೆ. ಕೇಂದ್ರ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಕಂಡಿತ ದೇಶಕ್ಕೆ ಭಾರಿ ನಷ್ಟ ಉಂಟಾಗಲಿದೆ.
ಪ್ರಸ್ತುತ ಬೆಳವಣಿಗೆ ಗಮನಿಸಿದರೆ ರುಪಾಯಿ ಮೌಲ್ಯ ಕುಸಿಯುತ್ತಾ ಬಂದಿದ್ದು, ಡಾಲರ್ ಮುಂದೆ ರುಪಾಯಿ ಮೌಲ್ಯವನ್ನು ಹೆಚ್ಚಿಸುವುದು ಕೇಂದ್ರ ಸರ್ಕಾರಕ್ಕೆ ಕಷ್ಟಕರವಾಗಿದೆ ಎಂದು ಮೋದಿ ಟೀಕಿಸಿದ್ದಾರೆ.
ಯುಪಿಎ ಸರ್ಕಾರ ಅಧಿಕಾರ ಮತ್ತು ನಾಯಕರ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಹೊರತು ದೇಶದ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿದೆ. ಕಳೆದ ಮೂರು ತಿಂಗಳಿನಿಂದ ರುಪಾಯಿ ಮೌಲ್ಯ ಭಾರಿ ಕುಸಿತ ಕಂಡಿದ್ದು, ಇದನ್ನು ಸರಿ ಪಡಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾಧನೀಯ ಎಂದು ಮೋದಿ ಹೇಳಿದ್ದಾರೆ.