13 ದಿನಗಳ ನಂತರ ಕರ್ಫ್ಯೂ ಹಿಂದಕ್ಕೆ: ಸಹಜ ಸ್ಥಿತಿಯತ್ತ ಕಿಶ್ತವಾರ್
13 ದಿನಗಳ ನಂತರ ಗಲಭೆ ಪೀಡಿತ ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್ ನಲ್ಲಿ ಕರ್ಫ್ಯೂ ಅನ್ನು ಬುಧವಾರ ಹಿಂಪಡೆಯಲಾಗಿದೆ...
ಕಿಶ್ತವಾರ್:13 ದಿನಗಳ ನಂತರ ಗಲಭೆ ಪೀಡಿತ ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್ ನಲ್ಲಿ ಕರ್ಫ್ಯೂ ಅನ್ನು ಬುಧವಾರ ಹಿಂಪಡೆಯಲಾಗಿದೆ.
ಕಿಶ್ತವಾರ್ ನಲ್ಲಿ ನಿಧಾನವಾಗಿ ಪರಿಸ್ಥತಿ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದ ಕರ್ಫ್ಯೂ ಅನ್ನು ಹಿಂಪಡೆಯಲಾಗಿದೆ ಎಂದು ಕಿಶ್ತ್ವಾರ್ ಜಿಲ್ಲಾಧಿಕಾರಿ ಬಸೀರ್ ಖಾನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಬಸೀರ್ ಖಾನ್ ಅವರು ಹೇಳಿದ್ದಾರೆ.
ಎರಡೂ ಕೋಮುಗಳ ನಡುವೆ ಜಂಟಿ ಸಭೆಗಳನ್ನು ನಡೆಸುವ ಮೂಲಕ ಉಭಯ ಕೋಮುಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸಲಾಗಿದೆ. ಅಲ್ಲದೆ ಉದ್ವೀಗ್ನ ಪರಿಸ್ಥಿತಿ ಅಂತ್ಯಗೊಳಿಸಲು ಶಾಂತಿ ರ್ಯಾಲಿಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಆಗಸ್ಟ್ 9ರಂದು ಸಂಭವಿಸದ್ದ ಕೋಮು ಗಲಭೆಯ ನಂತರ ಕಿಶ್ತ್ವಾರ್ನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಈ ಗಲಭೆಯಲ್ಲಿ ಮೂವರು ಮೃತಪಟ್ಟು, 20ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದರು.