ಅನಿಲ್ ಅಂಬಾನಿಯನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿ: ಸಿಬಿಐ
2ಜಿ ಸ್ಪೆಕ್ಟ್ರಾಂ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಎಡಿಎಜಿ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರನ್ನು...
ನವದೆಹಲಿ: 2ಜಿ ಸ್ಪೆಕ್ಟ್ರಾಂ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಎಡಿಎಜಿ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿ ಎಂದು ಕೇಂದ್ರಾ ತನಿಖಾ ತಂಡ(ಸಿಬಿಐ) ಗುರುವಾರ ಹೇಳಿದೆ.
2ಜಿ ಸ್ಪೆಕ್ಟ್ರಾಂ ಪ್ರಕರಣದ ತನಿಖೆಗೆ ಅನಿಲ್ ಅಂಬಾನಿ ಸರಿಯಾಗಿ ಸಹಕರಿಸುತ್ತಿಲ್ಲ. ಆದ್ದರಿಂದ ಅವರನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿ ಎಂದು ಸಿಬಿಐ ದೆಹಲಿ ಕೋರ್ಟ್‌ಗೆ ಮನವಿ ಮಾಡಿದೆ.
ಅನಿಲ್ ಅಂಬಾನಿ ಅವರು ನಿರಂತರವಾಗಿ ತಮ್ಮ ಹೇಳಿಕೆಗಳನ್ನು ಬದಲಿಸುತ್ತಾ ಬರುತ್ತಿದ್ದಾರೆ. ಇಂತಹ ಬದಲಾವಣೆ ಹೇಳಿಕೆಗಳು ವಿಚಾರಣೆಗೆ ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದು ಸಿಬಿಐ ದೂರಿದೆ.
ಇಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಯಾಗಿ ಹಾಜರಾದ ಅಂಬಾನಿ ಅವರು ಕಂಪನಿಯ ಹಲವು ಸಭೆಗಳನ್ನು ನೆನಪಿನಲ್ಲಿಟ್ಟುಕೊಳ್ಳುಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿಬಿಐ ಸಾಕ್ಷಿದಾರರಾಗಿ ಅನಿಲ್ ಅಂಬಾನಿ ಪ್ರತಿ ಸಾರಿ ಸುಪ್ರೀಂ ಕೋರ್ಟ್‌ಗೆ ಹಾಜರಾಗಬೇಕಿತ್ತು. ಇದರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವರು ಈ ಬಾರಿ ಕಂಪನಿ ನಡೆದಿರುವಂತಹ ಸಭೆಗಳನ್ನು ನೆನಪಿನಲ್ಲಿಟ್ಟುಕೊಂಡಿಲ್ಲ ಎಂದು ಪರೋಕ್ಷವಾಗಿ ಪ್ರಕರಣದಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಾನು ಅನೇಕ ಸಭೆಗಳಿಗೆ ಹಾಜರಾಗಿದ್ದೇನೆ. ಅವು ಯಾವುದು ನನಗೆ ನೆನಪಿಲ್ಲ. ದಾಖಲೆಗಳ ಮೂಲಕ ನಾನು ವಿಚಾರಣೆಗೆ ಸಹಕರಿಸುತ್ತಿದ್ದೇನೆ ಎಂದು ಅಂಬಾನಿ ಹೇಳಿದ್ದಾರೆ.
ದಾಖಲೆಗಳಲ್ಲಿರುವುದೇ ಸತ್ಯವಾಗಿರಬಹುದು. ಈ ದಾಖಲೆಗಳನ್ನು ನನ್ನ ಕಂಪನಿಯ ಸಿಬ್ಬಂದಿಗಳು ರಚನೆ ಮಾಡಿರುವುದು. ನನಗೆ ಸಭೆಯಲ್ಲಿ ನಡೆದಿರುವಂತ ಯಾವುದೇ ಚರ್ಚೆಗಳು ನೆನಪಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಅನಿಲ್ ಹಾಗೂ ಟೀನಾ ಅವರನ್ನು ಪ್ರಾಸಿಕ್ಯೂಷನ್ ಪರ ಸಾಕ್ಷಿಯನ್ನಾಗಿಸಬೇಕು ಎಂಬ ಸಿಬಿಐ ಮನವಿಗೆ ನ್ಯಾಯಾಲಯ ಒಪ್ಪಿಗೆ ನೀಡಿತ್ತು. ತದ ನಂತರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅಂಬಾನಿ ಅವರು ಹಿಂದೇಟು ಹಾಕಿದಾಗ, ಆಗಸ್ಟ್ 22ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ದೆಹಲಿ ಹೈಕೋರ್ಟ್ ಹೊಸ ಸಮನ್ಸ್ ಜಾರಿ ಮಾಡಿತ್ತು.