337 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ ಪಾಕಿಸ್ತಾನ
ಕರಾಚಿ: ಮೀನುಗಾರರು ಸೇರಿದಂತೆ ಇತರೆ 337 ಭಾರತೀಯ ಮೂಲದ ಖೈದಿಗಳನ್ನು ಪಾಕಿಸ್ತಾನ ಶುಕ್ರವಾರ ಬಿಡುಗಡೆ ಮಾಡಿದೆ.
ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಉಭಯ ದೇಶಗಳ ನಡುವೆ ಭಿನ್ನಭಿಪ್ರಾಯಗಳು ಮೂಡಿದೆ. ಇದರ ನಡುವೆ ಪಾಕಿಸ್ತಾನ ಸಿಂಧ್ ಪ್ರಾಂತ್ರ್ಯದಲ್ಲಿದ್ದ ಮಲಿರ್ ಜೈಲಿನಿಂದ 329 ಖೈದಿಗಳನ್ನು ಹಾಗೂ ಲಂದಿಯಲ್ಲಿದ್ದ ಬಾಲಪರಾಧ ಜೈಲಿನಿಂದ 8 ಬಾಲಪರಾಧಿಗಳನ್ನು ಇಂದು ಬಿಡುಗಡೆ ಮಾಡಿದೆ.
ರಾಷ್ಟ್ರೀಯತೆ ಬಗ್ಗೆ ನಿಖರವಾದ ದಾಖಲೆ ದೊರೆಯದೇ ಇದ್ದ ಕಾರಣ ಮಲಿರ್ ಜೈಲಿನಿಂದ ಭಾರತೀಯ ಮೂಲದ ಒಬ್ಬ ಖೈದಿಯನ್ನು ಬಿಡುಗಡೆ ಮಾಡಿಲ್ಲ ಎಂದು ಜೈಲು ಅಧಿಕಾರಿ ಶುಜಾ ಹೈಡರ್ ಹೇಳಿದ್ದಾರೆ.
ಇಂದು 337 ಭಾರತೀಯ ಮೂಲದ ಖೈದಿಗಳ ಜೈಲು ಶಿಕ್ಷೆ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಖೈದಿಗಳನ್ನು ನಾಳೆ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸಲಾಗುವುದು ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಮೀನುಗಾರರು ಪಾಕಿಸ್ತಾನದ ಕರಾವಳಿ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದರು.
ಪಾಕಿಸ್ತಾನ ಮತ್ತು ಭಾರತದ ಮೀನುಗಾರರು ಕರಾವಳಿ ಗಡಿಭಾಗದ ನಿಯಮ ಉಲ್ಲಂಘಿಸಿ ಗಡಿ ದಾಟುತ್ತಾರೆ. ಇಂತಹವರನ್ನು ಪಾಕ್ ಮತ್ತು ಭಾರತ ಬಂಧಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸುತ್ತದೆ.