ಮಹಿಳಾ ಪೊಲೀಸ್ ಪೇದೆ ಮೇಲೆ ಸಾಮೂಹಿಕ ಅತ್ಯಾಚಾರ
ಗುರುವಾರ ಮುಂಬೈಯಲ್ಲಿ ಆಂಗ್ಲ ಪತ್ರಿಕೆಯ ಛಾಯಾಗ್ರಾಹಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯ ಬೆನ್ನಲ್ಲೇ...
ರಾಂಚಿ: ಗುರುವಾರ ಮುಂಬೈಯಲ್ಲಿ ಆಂಗ್ಲ ಪತ್ರಿಕೆಯ ಛಾಯಾಗ್ರಾಹಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯ ಬೆನ್ನಲ್ಲೇ ಇದೀಗ ಜಾರ್ಖಂಡ್ನ ಲತೇಹಾರ್ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಬೆಳಗ್ಗೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75 ಬಳಿ ಸಶಸ್ತ್ರಧಾರಿಗಳಾದ ಮೂವರು ವ್ಯಕ್ತಿಗಳು ಮಹಿಳಾ ಪೊಲೀಸ್ ಮೇಲೆ ಅತ್ಯಾಚಾರವೆಸಗಿದ್ದಾರೆ.
ಆಗಸ್ಟ್ 20ಕ್ಕೆ ಸಾವನ್ನಪ್ಪಿದ್ದ ತನ್ನ ಭಾವನ ಮೃತದೇಹವನ್ನು ಸಂಬಂಧಿಕರ ಮನೆಗೆ ಒಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯ ದೂರಿನನ್ವಯ
ಲತೇಹಾರ್ ಪೊಲೀಸರು ಕೆಲವು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದ್ದಾರೆಯೇ ವಿನಾ ಯಾರೊಬ್ಬರನ್ನು ಬಂಧಿಸಿಲ್ಲ.
ತನ್ನ ಹೆತ್ತವರು, ಮಕ್ಕಳು ಹಾಗು ಸಂಬಂಧಿಕರೊಂದಿಗೆ ರಾಂಚಿಯಿಂದ ಗುರ್ಹ್ವಾ ಜಿಲ್ಲೆಗೆ ಪ್ರಯಾಣ ಮಾಡುತ್ತಿದ್ದ ವೇಳೆ ಸಶಸ್ತ್ರಧಾರಿಗಳಾದ ದುಷ್ಕರ್ಮಿಗಳು ವಾಹನಕ್ಕೆ ತಡೆಯೊಡ್ಡಿದ್ದಾರೆ. ಜಗ್ಲಾಡ್ಗಾ ಸೇತುವೆ ಬಳಿ ವಾಹನಗಳನ್ನು ನಿಲ್ಲಿಸಿದ ಈ ಆಗಂತುಕರು, ವಾಹನದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಇದಾದ ನಂತರ ವಾಹನದಲ್ಲಿದ್ದ ಮಹಿಳಾ ಪೊಲೀಸ್ನ್ನು ಹೊರಗೆಳೆದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಲತೇಹಾರ್ನ ಎಸ್ಪಿ ಮೈಕಲ್ ಎಸ್. ರಾಜ್ ಹೇಳಿದ್ದಾರೆ.