ಮೂರನೇ ಬಾರಿಯೂ ಅಧಿಕಾರಕ್ಕೇರುತ್ತೇವೆ: ಸೋನಿಯಾ
2014ರ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ನಾವು ಮೂರನೇ ಬಾರಿಯೂ ಅಧಿಕಾರಕ್ಕೇರಲಿದ್ದೇವೆ...
ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ನಾವು ಮೂರನೇ ಬಾರಿಯೂ ಅಧಿಕಾರಕ್ಕೇರಲಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ನ್ಯಾಷನಲ್ ಮೀಡಿಯಾ ಸೆಂಟರ್ನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸೋನಿಯಾ, ಆಹಾರ ಭದ್ರತಾ ಕಾಯ್ದೆ ಮುಂಗಾರು ಅಧಿವೇಶನದಲ್ಲಿ ಮಂಜೂರು ಆಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುಪಿಎ-3 ಅಧಿಕಾರಕ್ಕೇರಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಯಾ, ಹೌದು, 100 ಪರ್ಸೆಂಟ್ ಎಂದು ಉತ್ತರಿಸಿದ್ದಾರೆ.
ಅದೇ ವೇಳೆ ಚುನಾವಣೆಗೆ ಮುನ್ನ ಸರ್ಕಾರ ಯಾವ ಯೋಜನೆಯತ್ತ ಹೆಚ್ಚಿನ ಗಮನ ಹರಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಅಧ್ಯಕ್ಷೆ ನಮ್ಮ ಸರ್ಕಾರ ಮಾಹಿತಿ ಹಕ್ಕು, ವಿದ್ಯಾಭ್ಯಾಸದ ಹಕ್ಕು ಸೇರಿದಂತೆ ಆಹಾರದ ಹಕ್ಕು ಮೊದಲಾದ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.