ಆಹಾರ ಭದ್ರತೆ: ಬಡತನ ನಿರ್ಮೂಲನೆಗೆ ಸಹಕಾರಿ
ಸಂಸತ್‌ನಲ್ಲಿ ಆಹಾರ ಭದ್ರತಾ ಮಸೂದೆ ಮಂಡನೆಯ ವೇಳೆ ಮಾತನಾಡಿದ ಯುಪಿಎ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...
ನವದೆಹಲಿ: ಸಂಸತ್‌ನಲ್ಲಿ ಆಹಾರ ಭದ್ರತಾ ಮಸೂದೆ ಮಂಡನೆಯ ವೇಳೆ ಮಾತನಾಡಿದ ಯುಪಿಎ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇನ್ಮುಂದೆ ದೇಶದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲುವುದಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಆಹಾರ ಭದ್ರತಾ ಮಸೂದೆ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸೋನಿಯಾ, ನಾವು 2009ರಲ್ಲಿ ಆಹಾರ ಭದ್ರತಾ ಮಸೂದೆ ಜಾರಿ ಮಾಡುವುದಾಗಿ ಮಾತು ನೀಡಿದ್ದೆವು. ಇದೀಗ ನಮ್ಮ ಮಾತನ್ನು ಅನುಷ್ಠಾನಗೊಳಿಸುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.
ಇವತ್ತು ನಾವು ಐತಿಹಾಸಿಕ ಹೆಜ್ಜೆಯೊಂದನ್ನು ಇಡುತ್ತಿದ್ದೇವೆ ಎಂದು ಹೇಳಿದ ಸೋನಿಯಾ ಮಸೂದೆ ಜಾರಿ ಮಾಡಲು ವಿಪಕ್ಷಗಳು ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.
ನಮ್ಮ ದೇಶದಲ್ಲಿ ಯಾವುದೇ ಒಂದು ಮಗು ಅಪೌಷ್ಠಿಕತೆಯಿಂದ ಬಳಲಬಾರದು ಎಂಬುದು ನಮ್ಮ ಆಶಯ.
ಕೆಲವೊಂದು ಜನರು ನಮ್ಮಲ್ಲಿ ಕೇಳುತ್ತಾರೆ, ನಿಮ್ಮಲ್ಲಿ ಅಷ್ಟೊಂದು ಸಂಪನ್ಮೂಲಗಳು ಇವೆಯೇ? ಎಂದು. ಅದಕ್ಕೆ ನಾನು ಈ ರೀತಿ ಉತ್ತರ ಹೇಳುತ್ತೇನೆ; ಇಲ್ಲಿ ಎಷ್ಟು ಸಂಪನ್ಮೂಲಗಳು ಇವೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ, ಬದಲಾಗಿ ನಾವು ಆ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ.
ನಾವು ಈ ಕೆಲಸವನ್ನು ಮಾಡಲು ಸಾಧ್ಯವೆ? ಎಂಬ ಪ್ರಶ್ನೆಗಿಂತ ನಾವು ಈ ಕೆಲಸವನ್ನು ಮಾಡಲೇಬೇಕು ಎಂಬ ನಿಲುವು ನಮ್ಮಲ್ಲಿರಬೇಕು ಎಂದು ಸೋನಿಯಾ ಹೇಳಿದ್ದಾರೆ.