ಗ್ಯಾಂಗ್‌ರೇಪ್ ಮಾಡಿದ ನಂತರ ಆರೋಪಿಗಳು ಸಿನಿಮಾ ವೀಕ್ಷಿಸಿದ್ದರು
ಪತ್ರಿಕಾ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರಗೈದ ನಂತರ ಆರೋಪಿಗಳು ತಾವು ಏನೂ ಮಾಡಿಲ್ಲ ಎಂಬಂತೆ ಸಿನಿಮಾ...
ಮುಂಬೈ: ಪತ್ರಿಕಾ ಛಾಯಾಗ್ರಾಹಕಿಯನ್ನು ಸಾಮೂಹಿಕ ಅತ್ಯಾಚಾರಗೈದ ನಂತರ ಆರೋಪಿಗಳು ತಾವು ಏನೂ ಮಾಡಿಲ್ಲ ಎಂಬಂತೆ ಸಿನಿಮಾ ವೀಕ್ಷಿಸಲು ಹೋಗಿದ್ದರು ಎಂಬುದು ವಿಚಾರಣೆ ವೇಳೆಗೆ ತಿಳಿದು ಬಂದಿದೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯ ಬಹಿರಂಗವಾಗಿದೆ. 23ರ ಹರೆಯದ ಪತ್ರಿಕಾ ಛಾಯಾಗ್ರಾಹಕಿನ್ನು ಅತ್ಯಾಚಾರಗೈದ ನಂತರ ಈ ಆರೋಪಿಗಳು ಎನ್‌ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆ ಬಳಿಯಲ್ಲಿರುವ ಟೀ ಸ್ಟಾಲ್‌ನಲ್ಲಿ ಟೀ ಕುಡಿದಿದ್ದರು.
ಇದಾದನಂತರ ಅಲ್ಲೇ ಮೊಸರು ಕುಡಿಕೆ ಸ್ಪರ್ಧೆಗಾಗಿ ತಾಲೀಮು ನಡೆಸುತ್ತಿದ್ದು, ಅದರಲ್ಲೂ ಭಾಗವಹಿಸಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ 19ರ ಹರೆಯದ ಜಾಧವ್ ಪೊಲೀಸರಿಗೆ ವಿಚಾರಣೆ ವೇಳೆ ಈ ಮಾಹಿತಿ ನೀಡಿದ್ದಾನೆ.
ಜಾಧವ್ ಧೋಬಿಘಾಟ್‌ನಲ್ಲಿರುವ ತನ್ನ ಮನೆಗೆ ತೆರಳುವ ಮುನ್ನ ಟೀ ಕುಡಿದು ಇನ್ನೊರ್ವ ಆರೋಪಿ ಸಲೀಂ ಅನ್ಸಾರಿಯನ್ನು ಭೇಟಿ ಮಾಡಿದ್ದಾನೆ. ಆಮೇಲೆ ಇವರಿಬ್ಬರೂ ಪಕ್ಕದಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮಲಗಿ ರಾತ್ರಿ ಕಳೆದಿದ್ದಾರೆ.
ಶುಕ್ರವಾರ ಬೆಳಗ್ಗೆದ್ದು ಇವರಿಬ್ಬರೂ ಮುಂಬೈ ಸೆಂಟ್ರಲ್‌ನಲ್ಲಿರುವ ಮರಾಠ ಮಂದಿರದಲ್ಲಿ ದಿಲ್‌ವಾಲೇ ದುಲ್ಹನಿಯಾ ಲೇಜಾಯೇಂಗೆ ಸಿನಿಮಾ ವೀಕ್ಷಿಸಿದ್ದರು.
ಸಿನಿಮಾ ವೀಕ್ಷಿಸಿ ಹಿಂತಿರುಗುವ ವೇಳೆಗೆ ಇವರಿಬ್ಬರಿಗೆ ಅತ್ಯಾಚಾರದ ಆರೋಪದಲ್ಲಿ ಗೆಳೆಯ ಚಾಂದ್ ಬಾಬು ಸತ್ತಾರ್ ಶೇಖ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದು ಗೊತ್ತಾಗಿದೆ. ಆವಾಗ ಜಾಧವ್ ಮಧನ್‌ಪುರದಲ್ಲಿ ವೀಡಿಯೋ ಪಾರ್ಲರ್‌ವೊಂದರಲ್ಲಿ ಅಡಗಿದರೆ, ಅನ್ಸಾರಿ ಕುರ್ಲಾಗೆ ತೆರಳಿ ಅಲ್ಲಿಂದ ದೆಹಲಿಗೆ ಹೋಗಿ ತಲೆಮರೆಸಿಕೊಂಡಿದ್ದನು.
ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ಅಧಿಕಾರಿಗಳು ಅನ್ಸಾರಿಯನ್ನು ದೆಹಲಿಯ ಅಶೋಕ ವಿಹಾರದಲ್ಲಿರುವ ಕೊಳಚೆಗೇರಿಯೊಂದರಿಂದ ಬಂಧಿಸಿದ್ದರು.