ತೊಗಾಡಿಯಾ, ಸಿಂಘಾಲ್ ಬಿಡುಗಡೆಗೆ 'ಹೈ' ಆದೇಶ
ನಿಷೇಧದ ನಡುವೆಯೂ ಅಯೋಧ್ಯೆಯ ವಿವಾದಿತ ಸ್ಥಳದಿಂದ ಯಾತ್ರೆ ನಡೆಸಲು ಯತ್ನಿಸಿ, ಬಂಧನಕ್ಕೆ ಒಳಗಾಗಿರುವ ವಿಶ್ವ..
ಲಖನೌ: ನಿಷೇಧದ ನಡುವೆಯೂ ಅಯೋಧ್ಯೆಯ ವಿವಾದಿತ ಸ್ಥಳದಿಂದ ಯಾತ್ರೆ ನಡೆಸಲು ಯತ್ನಿಸಿ, ಬಂಧನಕ್ಕೆ ಒಳಗಾಗಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ನ ಪ್ರಮುಖ ನಾಯಕರಾದ ಪ್ರವೀಣ್ ತೊಗಾಡಿಯಾ ಹಾಗೂ ಅಶೋಕ್ ಸಿಂಘಾಲ್ ಮತ್ತು ಬಿಜೆಪಿ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ ಅವರನ್ನು ಬಿಡುಗಡೆ ಮಾಡುವಂತೆ ಅಲಹಬಾದ್ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ತೊಗಾಡಿಯಾ, ಸಿಂಘಾಲ್, ವೇದಾಂತಿ ಹಾಗೂ ಹಾಲಿ ಬಿಜೆಪಿ ಶಾಸಕ ರಾಮಚಂದ್ರ ಯಾದವ್ ಸೇರಿದಂತೆ ನಿನ್ನೆ 1700ಕ್ಕು ಅಧಿಕ ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ತೊಗಾಡಿಯಾರನ್ನು ಅಯೋಧ್ಯೆಯಲ್ಲಿ ವಶಕ್ಕೆ ತೆಗೆದುಕೊಂಡರೆ, ಸಿಂಘಾಲರನ್ನು ಲಖನೌ ಏರ್‌ಪೋರ್ಟ್‌ನಲ್ಲಿ ತಡೆ ಹಿಡಿಯಲಾಯಿತು. ಈ ವೇಳೆ ಏರ್‌ಪೋರ್ಟ್‌ನ ಹೊರಗಡೆ ವಿಎಚ್‌ಪಿ ಹಾಗೂ ಬಿಜೆಪಿ ಕಾರ್ಯಕರ್ತರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಇದ್ಯಾವುದಕ್ಕೂ ಜಗ್ಗದ ಸರ್ಕಾರ ಯಾತ್ರೆ ಸಂಪೂರ್ಣ ವಿಫಲವಾಗುವಂತೆ ಮಾಡಿತ್ತು.
ಕಾನೂನು ಬಾಹಿರವಾಗಿ ವಿಎಚ್‌ಪಿ ನಾಯಕರನ್ನು ಬಂಧಿಸಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್‌ನ ಲಖನೌ ಪೀಠ, ನಾಯಕರನ್ನು ಬಿಡುಗಡೆಗೆ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಈ ಸಂಬಂಧ ಸ್ಥಳೀಯ ವಕೀಲ ರಂಜನ ಅಗ್ನಿಹೋತ್ರಿ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯದೀಶ ಇಮ್ತಿಯಾಜ್ ಮುರ್ತುಜ ಹಾಗೂ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರು, ಈ ಮೂವರು ನಾಯಕ ವಿರುದ್ಧ ಬೆರೆ ಯಾವುದೇ ಪ್ರಕರಣ ಬಾಕಿ ಇಲ್ಲದಿದ್ದರೆ, ಕೂಡಲೇ ಅವರನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದಾರೆ.
ತೊಗಾಡಿಯಾ ಹಾಗೂ ಸಿಂಘಾಲ್ ಬಂಧನ ಇಂದು ಸಂಸತ್ತಿನಲ್ಲೂ ಪ್ರತಿಧ್ವನಿಸಿದ್ದು, ಸಂಸತ್ತಿನ ಉಭಯ ಸದನಗಳಲ್ಲೂ ಗದ್ದಲ ಸೃಷ್ಟಿಸಿತು. ಇದರಿಂದ ಎರಡು ಬಾರಿ ಕಲಾಪವನ್ನು ಮುಂದೂಡಲಾಯಿತು. ಅಲ್ಲದೆ ವಿಎಚ್‌ಪಿ ನಾಯಕರ ಬಂಧನವನ್ನು ಖಂಡಿಸಿ ದೆಹಲಿಯಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ.