ದಂಗೆಗಳ ಮೂಲಕ ಬಿಜೆಪಿ ಮತ ಗಿಟ್ಟಿಸಲು ಯತ್ನಿಸುತ್ತಿದೆ: ಮುಲಾಯಂ
ವಿಶ್ವ ಹಿಂದೂ ಪರಿಷತ್ತಿನ 84ನೇ ಕೋಸಿ ಯಾತ್ರೆಗೆ ತಡೆಯೊಡ್ಡಿರುವ ಉತ್ತರಪ್ರದೇಶದ ಸರ್ಕಾರದ ಬಗ್ಗೆ ಸಂಸತ್ನಲ್ಲಿ ಬಿಜೆಪಿ ಟೀಕೆಗೆ...
ನವದೆಹಲಿ: ವಿಶ್ವ ಹಿಂದೂ ಪರಿಷತ್ತಿನ 84ನೇ ಕೋಸಿ ಯಾತ್ರೆಗೆ ತಡೆಯೊಡ್ಡಿರುವ ಉತ್ತರಪ್ರದೇಶದ ಸರ್ಕಾರದ ಬಗ್ಗೆ ಸಂಸತ್ನಲ್ಲಿ ಬಿಜೆಪಿ ಟೀಕೆಗೆ ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಪ್ರತ್ಯುತ್ತರ ನೀಡಿದ್ದಾರೆ.
ಸಂಸತ್ನಲ್ಲಿ ಬಿಜೆಪಿಯ ಟೀಕೆಗೆ ಉತ್ತರಿಸಿದ ಮುಲಾಯಂ ಉತ್ತರ ಪ್ರದೇಶ ಸರ್ಕಾರ ರಾಮಜನ್ಮಭೂಮಿ ಪ್ರಕರಣ ಇತ್ಯರ್ಥವಾಗುವ ವರೆಗೆ ಅಯೋಧ್ಯೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಸಾರವಾಗಿ ವರ್ತಿಸಿದೆ ಎಂದಿದ್ದಾರೆ.
ಆದ್ದರಿಂದ ಬಿಜೆಪಿ, ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ.
ಅದೇ ವೇಳೆ ಅಯೋಧ್ಯೆ ಯಾತ್ರೆಗೆ ಹೊರಟ ಜನರನ್ನು ಪೊಲೀಸರು ತಡೆ ಹಿಡಿದಿದ್ದು, ಹಲವಾರು ಮಂದಿಗೆ ಗಾಯಗಳಾಗಿವೆ ಎಂದು ಸುದ್ದಿಯಾಗಿತ್ತು. ಈ ಸುದ್ದಿ ಸತ್ಯಕ್ಕೆ ದೂರ ಎಂದು ಹೇಳಿದ ಮುಲಾಯಂ, ಯಾರೊಬ್ಬರಿಗೂ ಗಾಯಗಳಾಗಿಲ್ಲ, ಪೊಲೀಸರು ಅಯೋಧ್ಯೆಯತ್ತ ಹೋಗುವವರನ್ನು ತಡೆದಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಿಜೆಪಿ ಕೋಮುವಾದದಿಂದ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಹೇಳಿದ ಮುಲಾಯಂ, ದಂಗೆಗಳನ್ನು ಮಾಡುವ ಮೂಲಕ ಬಿಜೆಪಿ ಮತ ಗಿಟ್ಟಿಸಲು ಯತ್ನಿಸುತ್ತಿದೆ ಎಂದಿದ್ದಾರೆ.
ಮಾತ್ರವಲ್ಲದೆ ತನ್ನ ಪಕ್ಷದ ಕಚೇರಿ ಮೇಲಿನ ದಾಳಿ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ ಮುಲಾಯಂ, ಬಿಜೆಪಿ ಗೂಂಡಾಗಿರಿ ಮಾಡುತ್ತಿದೆ ಎಂದಿದ್ದಾರೆ.