ಸರ್ಕಾರದ ಶತದಿನೋತ್ಸವಕ್ಕಿಲ್ಲ ಅದ್ಧೂರಿ ಸಮಾರಂಭ
ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಯಾವುದೇ ಅದ್ಧೂರಿ ಸಮಾರಂಭ ಮಾಡುವುದಿಲ್ಲ..
ಬೆಂಗಳೂರು: ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಯಾವುದೇ ಅದ್ಧೂರಿ ಸಮಾರಂಭ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ತಮ್ಮ ನೇತೃತ್ವದ ಸರ್ಕಾರ ನೂರು ದಿನ ಪೂರೈಹಿಸಿದ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ 'ನೂರು ದಿನ ನೂರಾರು ನಿರ್ಣಯ' ಎಂಬ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಎಂ, 100 ದಿನದಲ್ಲಿ ಸರ್ಕಾರದ ಸಾಧನೆ ಅಳೆಯಲು ಸಾಧ್ಯವಿಲ್ಲ. ಕಳೆದ ನೂರು ದಿನಗಳ ಅವಧಿಯಲ್ಲಿ ಹಲವಾರು ತೊಡಕುಗಳು ಎದುರಾದವು. ಇದರ ಮಧ್ಯೆಯೇ ಮೂರು ಚುನಾವಣೆಯನ್ನು ಎದುರಿಸಿ ಗೆದ್ದಿದ್ದೇವೆ ಎಂದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಅನ್ನಭಾಗ್ಯ' ಯೋಜನೆ ಯಶಸ್ವಿಯಾಗಿದೆ. ಅಕ್ಕಿ ವಿತರಣೆಯಲ್ಲಿ ಕೆಲವು ಲೋಪದೋಷಗಳಿದ್ದವು. ಅವುಗಳನ್ನೆಲ್ಲ ಈಗ ಸರಿಪಡಿಸಲಾಗಿದೆ. ಇದು ಬಡವರ ಕಾರ್ಯಕ್ರಮ. ಬಡವರ ಕಾರ್ಯಕ್ರಮಗಳನ್ನು ಆತುರವಾಗಿ ಮಾಡಬೇಕು ಎಂದು ಸಿದ್ದು ಹೇಳಿದರು.