ಅತ್ಯಾಚಾರ ಪ್ರಕರಣದಲ್ಲಿ ರಾಜಿ ಬೇಡ: ಸುಪ್ರೀಂ
ಮಹಿಳೆಯ ಮೇಲೆ ಲೈಂಗಿಕ ಅಪರಾಧದ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ರಾಜಿ ಮಾಡಿ...
ನವದೆಹಲಿ: ಮಹಿಳೆಯ ಮೇಲೆ ಲೈಂಗಿಕ ಅಪರಾಧದ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ರಾಜಿ ಮಾಡಿ ಇತ್ಯರ್ಥಗೊಳಿಸಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ವೇಳೆ ಅತ್ಯಾಚಾರಕ್ಕೊಳಗಾದವರೇ ಆರೋಪಿಗಳನ್ನು ಕ್ಷಮಿಸಿ ಪ್ರಕರಣ ಇತ್ಯರ್ಥಗೊಳಿಸುವುದಾದರೆ ಸರಿ, ಇಲ್ಲವೆಂದಾದರೆ ಆ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಪಿ ಸಾಂತಶಿವಂ ಅವರ ನೇತೃತ್ವದ ನ್ಯಾಯಪೀಠವು ಅತ್ಯಾಚಾರದಂತ ಪ್ರಕರಣಗಳನ್ನು ರಾಜಿ ಮಾಡಿ ಇತ್ಯರ್ಥಗೊಳಿಸುವುದು ಕಾನೂನುಬಾಹಿರ ಎಂದು ಹೇಳಿದ್ದಾರೆ. ಇಂಥಾ ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ನ್ಯಾಯಪೀಠ ಆಗ್ರಹಿಸಿದೆ.
ಇತ್ತೀಚೆಗೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಿಕ್ಕಾಗಿ ರಾಜಿ ಸಂಧಾನ ಮಾಡಲಾಗುತ್ತಿದೆ. ಇಂಥಾ ಬೆಳವಣಿಗೆಗಳಿಗೆ ಕಡಿವಾಣ ಹಾಕಲೇಬೇಕು ಎಂದು ನ್ಯಾಯಪೀಠ ಹೇಳಿದೆ.
ಅದೇ ವೇಳೆ ಅತ್ಯಾಚಾರ ಎಂಬುದು ಮಹಿಳೆಯ ಮೇಲಿನ ಶಾರೀರಿಕ ಅಥವಾ ಮಾನಸಿಕ ದೌರ್ಜನ್ಯ ಅಲ್ಲ, ಅದು ಸಮಾಜದ ಮೇಲೆ ಮಾಡುವ ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ.