ನಕ್ಸಲರಿಂದ ನಾಲ್ವರು ಬಿಎಸ್ಎಫ್ ಯೋಧರ ಹತ್ಯೆ
ಒಡಿಶಾದ ಕೋರಾಪಟ್ ಜಿಲ್ಲೆಯಲ್ಲಿ ನಕ್ಸಲರು ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ನಾಲ್ವರು ಯೋಧ..
ಕೋರಾಪಟ್(ಒಡಿಶಾ): ಒಡಿಶಾದ ಕೋರಾಪಟ್ ಜಿಲ್ಲೆಯಲ್ಲಿ ನಕ್ಸಲರು ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ನಾಲ್ವರು ಯೋಧರನ್ನು ಮಂಗಳವಾರ ಹತ್ಯೆ ಮಾಡಿದ್ದಾರೆ.
ಬಿಎಸ್ಎಫ್ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ನಕ್ಸಲರು ಐಇಡಿ ಬಳಸಿ ಅವರ ವಾಹನವನ್ನು ಸ್ಫೋಟಿಸಿದ್ದಾರೆ. ಈ ಸ್ಫೋಟದಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಬಿಎಸ್ಎಫ್ನ ಮೂರು ವಾಹನಗಳಲ್ಲಿ 18 ಯೋಧರು ಜಿಲ್ಲೆಯ ಪತಂಗಿಯಿಂದ ಸುಂಕಿಗೆ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಐಇಡಿ ಬಾಂಬ್ ಸ್ಫೋಟಗೊಂಡಿದ್ದು, ಮೊದಲ ವಾಹನದಲ್ಲಿದ್ದ ನಾಲ್ವರು ಯೋಧರ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಗಾಯಗೊಂಡ ಇಬ್ಬರೂ ಯೋಧರನ್ನು ಸುಂಕಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಫೋಟ ನಡೆದ ಸ್ಥಳದಲ್ಲಿ ನಕ್ಸಲರ ಹಾಗೂ ಬಿಎಸ್ಎಫ್ ಯೋಧರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ. ರಾಜ್ಯ ಪೊಲೀಸರು ಹಾಗೂ ಅರೇ ಸೇನಾಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.