ಮುಖ್ಯಮಂತ್ರಿಗಳ ಒಪ್ಪಿಗೆ ಸಿಗುವ ತನಕ ಆಹಾರ ಭದ್ರತಾ ಮಸೂದೆಗೆ ತಡೆ: ಮುಲಾಯಂ ಆಗ್ರಹ
ಆಹಾರ ಭದ್ರತಾ ಮಸೂದೆಗೆ ಲೋಕಸಭೆಯಲ್ಲಿ ಬೆಂಬಲ ಸೂಚಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್...
ನವದೆಹಲಿ: ಆಹಾರ ಭದ್ರತಾ ಮಸೂದೆಗೆ ಲೋಕಸಭೆಯಲ್ಲಿ ಬೆಂಬಲ ಸೂಚಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಇದೀಗ ಪ್ರಸ್ತುತ ಮಸೂದೆಗೆ ಎಲ್ಲ ಮುಖ್ಯಮಂತ್ರಿಗಳ ಒಪ್ಪಿಗೆ ಸಿಗುವ ತನಕ ಅದನ್ನು ತಡೆಹಿಡಿಯಬೇಕು ಎಂದು ಹೇಳಿದ್ದಾರೆ.
ಸೋಮವಾರ ಆಹಾರ ಭದ್ರತೆ ಮಸೂದೆ ಕೆಳಮನೆಯಲ್ಲಿ ಅಂಗೀಕರಿಸಲ್ಪಟ್ಟಿತ್ತು. ಆದಾಗ್ಯೂ, ರಾಜ್ಯಸಭೆಯಲ್ಲಿ ಈ ಮಸೂದೆಯ ಬಗ್ಗೆ ಗುರುವಾರ ಚರ್ಚೆ ನಡೆಯುವ ಸಾಧ್ಯತೆಯಿದೆ.
ಆಹಾರ ಭದ್ರತಾ ಮಸೂದೆಯು ರಾಜ್ಯಗಳ ಮೇಲೆ ಹೆಚ್ಚಿನ ಹೊರೆಯಾಗಲಿದ್ದು, ಕೇಂದ್ರ ಸರ್ಕಾರ ಚುನಾವಣೆಯನ್ನು ಲಕ್ಷ್ಯವಾಗಿರಿಸಿಕೊಂಡೇ ಈ ಮಸೂದೆಯನ್ನು ಪ್ರಸ್ತಾಪಿಸಿದೆ ಎಂದು ಮುಲಾಯಂ ನಿನ್ನೆ ಹೇಳಿದ್ದರು.
ಈ ಮಸೂದೆಯಿಂದ ರೈತರಿಗೆ ಅನ್ಯಾಯವಾಗಲಿದ್ದು, ತಾವು ಬೆಳೆದ ಎಲ್ಲ ಉತ್ಪನ್ನಗಳನ್ನು ಸರ್ಕಾರ ಕೊಂಡುಕೊಳ್ಳುತ್ತದೆ ಎಂಬ ಯಾವ ಭರವಸೆ ರೈತರಿಗಿಲ್ಲ ಎಂದು ಹೇಳಿದ್ದಾರೆ.
ಇದೆಲ್ಲವೂ ಚುನಾವಣಾ ಗಿಮಿಕ್ ಎಂದು ಹೇಳಿದ ಮುಲಾಯಂ, ಬಡವರು ಹಸಿವಿನಿಂದ ನರಳಿ ಸತ್ತಾಗ ಈ ಮಸೂದೆಯನ್ನು ಯಾಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ್ದಾರೆ.