ಕಲ್ಲಿದ್ದಲು ಪ್ರಕರಣ: ನಾಪತ್ತೆಯಾಗಿರುವ ಕಡತ ಪತ್ತೆಗೆ ಡೆಡ್ಲೈನ್
ಕಲ್ಲಿದ್ದಲು ಪ್ರಕರಣದ ನಾಪತ್ತೆಯಾಗಿರುವ ಕಡತಗಳನ್ನು ಪತ್ತೆ ಮಾಡಲು ವಿಳಂಬ ಮಾಡುತ್ತಿರುವ ಸಿಬಿಐ ವಿರುದ್ಧ ಸುಪ್ರೀಂ...
ನವದೆಹಲಿ: ಕಲ್ಲಿದ್ದಲು ಪ್ರಕರಣದ ನಾಪತ್ತೆಯಾಗಿರುವ ಕಡತಗಳನ್ನು ಪತ್ತೆ ಮಾಡಲು ವಿಳಂಬ ಮಾಡುತ್ತಿರುವ ಸಿಬಿಐ ವಿರುದ್ಧ ಸುಪ್ರೀಂಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ.
ಅದೇ ವೇಳೆ ನಾಪತ್ತೆಯಾಗಿರುವ ಕಡತಗಳನ್ನು 2 ವಾರದೊಳಗೆ ಪತ್ತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಭರವಸೆ ನೀಡಿದೆ.
ನಾಪತ್ತೆಯಾಗಿರುವ ಕಡತಗಳ ಬಗ್ಗೆ ಕೆಲವು ವಿವಾದಗಳೆದ್ದಿವೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದಕ್ಕೆ ಉತ್ತರಿಸಿದ ಸುಪ್ರೀಂ, ಇದೊಂದು ಲಘು ಹೇಳಿಕೆ ಎಂದಿದೆ. ಮಾತ್ರವಲ್ಲದೆ ಆದಷ್ಟು ಬೇಗ ನಾಪತ್ತೆಯಾದ ಕಡತಗಳನ್ನು ಪತ್ತೆ ಮಾಡಬೇಕೆಂದು ಸಿಬಿಐಗೆ ಹೇಳಿದೆ.
ಸಿಬಿಐ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದರ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ ಸುಪ್ರೀಂ, ಪ್ರಸ್ತುತ ಪ್ರಕರಣದಲ್ಲಿ 169 ಕಂಪನಿಗಳು ಭಾಗಿಯಾಗಿವೆ ಎಂಬ ಆರೋಪವಿದೆ. ಆದ್ದರಿಂದ ಆದಷ್ಟು ಬೇಗ ತನಿಖೆ ಮಾಡಿ ವರದಿ ಸಲ್ಲಿಸಬೇಕು ಎಂದು ಹೇಳಿದೆ.
ಆದಾಗ್ಯೂ, ಕೆಲವೊಂದು ಪ್ರಧಾನ ಕಡತಗಳು ಸರ್ಕಾರದಿಂದ ನಮಗೆ ಲಭಿಸಿಲ್ಲವಾಗಿದ್ದರಿಂದ ತನಿಖೆಯ ಗತಿಯೂ ಕ್ಷೀಣಿಸಿದೆ ಎಂದು ಸಿಬಿಐ, ಸುಪ್ರೀಂ ಕೋರ್ಟ್ಗೆ ಉತ್ತರಿಸಿದೆ.