ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ: ಪ್ರಧಾನಿ
ರುಪಾಯಿ ಮೌಲ್ಯ ಕುಸಿತ ಹಾಗೂ ತೈಲ ಬೆಲೆ ಏರಿಕೆ ಭಾರತೀಯ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ..
ನವದೆಹಲಿ: ರುಪಾಯಿ ಮೌಲ್ಯ ಕುಸಿತ ಹಾಗೂ ತೈಲ ಬೆಲೆ ಏರಿಕೆ ಭಾರತೀಯ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರುಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆಯ ಕುಸಿತದ ಬಗ್ಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂಬ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಒತ್ತಾಯಕ್ಕೆ ಮಣಿದ ಪ್ರಧಾನಿ, ದೇಶ ತೀವ್ರ ಆರ್ಥಿಕ ಸಂಕಷ್ಟು ಎದುರಿಸುತ್ತಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇದಕ್ಕೆ ಆಂತರಿಕ ಕಾರಣಗಳು ಸೇರಿದಂತೆ ಹಲವು ಕಾರಣಗಳಿವೆ ಎಂದರು.
ಭಾರತದ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾದ ಹೊರಗಿನ ಅಂಶಗಳನ್ನು ಪಟ್ಟಿ ಮಾಡಿದ ಪ್ರಧಾನಿ, ಅಮೆರಿಕದ ಆರ್ಥಿಕ ಕ್ರಮ, ಸಿರಿಯಾದ ಮೇಲಿನ ಯುದ್ಧ ಭೀತಿ ಹಾಗೂ ಏರುತ್ತಿರುವ ತೈಲ ಬೆಲೆ ರುಪಾಯಿ ಕುಸಿತಕ್ಕೆ ಕಾರಣವಾಗಿದೆ ಎಂದರು.
ಈ ಕುರಿತು ಯೋಚಿಸಲು ತಮಗೆ ಇನ್ನಷ್ಟು ಸಮಯ ಬೇಕು ಎಂದು ಕೇಳಿದ ಪ್ರಧಾನಿ ಸಿಂಗ್, ಈ ಬಗ್ಗೆ ನಾಳೆ ಸಂಪೂರ್ಣ ವಿವರ ನೀಡುವುದಾಗಿ ಹೇಳಿದರು.