ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೇಪಾಳ ಗಡಿಯಲ್ಲಿ ಯಾಸಿನ್ ಭಟ್ಕಳ್ ಬಂಧನ

ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಇಂಡಿಯನ್ ಮುಜಾಯಿದ್ದೀನ್ ಸಂಘಟನೆಯ ಮೋಸ್ಟ್ ವಾಂಟೆಡ್...

Lingaraj Badiger
Updated On : 29 Aug 2013, 1:28 am

ನವದೆಹಲಿ: ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ಹಲವು ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಇಂಡಿಯನ್ ಮುಜಾಯಿದ್ದೀನ್ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್‌ನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಭಾರತ-ನೇಪಾಳ ಗಡಿಯಲ್ಲಿ ರಾಷ್ಟ್ರೀಯ ತನಿಖಾ ದಳದ(ಎಸ್‌ಐಎ) ಪೊಲೀಸರು ಕುಖ್ಯಾತ ಉಗ್ರ ಯಾಸಿನ್ ಭಟ್ಕಳ್‌ನನ್ನು ವಶಕ್ಕೆ ತೆಗೆದುಕೊಂಡಿದ್ದು, ಇದಕ್ಕೆ ಕರ್ನಾಟಕ ಪೊಲೀಸರು ಸಹ ಸಾಥ್ ನೀಡಿದ್ದಾರೆ.

ಐಎಂ ಸಂಘಟನೆಯ ಮಾಸ್ಟರ್ ಮೈಂಡ್ ಆಗಿದ್ದ ಯಾಸಿನ್ ಭಟ್ಕಳ್, ಬೆಂಗಳೂರು, ಸೂರತ್, ಮುಂಬೈ, ಪುಣೆ, ಅಹಮದಾಬಾದ್ ಹಾಗೂ ನವದೆಹಲಿಯಲ್ಲಿ ಸಂಭವಿಸಿದ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಮೂಲತ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನಾದ ಈ ಯಾಸಿನ್ ಭಟ್ಕಳ್‌ನ ಕುರಿತು ಮಾಹಿತಿ ನೀಡಿದವರಿಗೆ 15 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು. ಅಲ್ಲದೆ ಭಟ್ಕಳ್ ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಪರಾರಿಯಾಗಿರುಬಹುದು ಎಂದು ಶಂಕಿಸಲಾಗಿತ್ತು.

ಇತ್ತಿಚೀಗಷ್ಟೇ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಅಬ್ದುಲ್ ಕರೀಂ ತುಂಡಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು ಇದೀಗ ಎರಡನೇ ಮೋಸ್ಟ್ ವಾಂಟೆಡ್ ಉಗ್ರನನ್ನು ಬಂಧಿಸಿದ್ದಾರೆ. ಇದರಿಂದ ಉಗ್ರರ ವಿರುದ್ಧದ ಪೊಲೀಸರ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.

ಹೈದರಾಬಾದ್ ಅವಳಿ ಸ್ಫೋಟದ ರೂವಾರಿ ಈ ಭಟ್ಕಳ್
2013 ಫೆಬ್ರುವರಿ 21ರಂದು 16 ಮಂದಿಯನ್ನು ಬಲಿ ಪಡೆದು ಹೈದರಾಬಾದ್‌ನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟದಲ್ಲಿ ಯಾಸಿನ್ ಭಟ್ಕಳ್ ಭಾಗಿಯಾಗಿದ್ದಾನೆ. ಈ ಅವಳಿ ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಶಂಕಿತ ವ್ಯಕ್ತಿಯ ದೃಶ್ಯ ಸೆರೆಯಾಗಿತ್ತು. ಆ ದೃಶ್ಯದಲ್ಲಿದ್ದ ವ್ಯಕ್ತಿ ಖುದ್ದು ಯಾಸಿನ್ ಭಟ್ಕಳನೇ ಎಂದು ಶಂಕಿಸಲಾಗಿತ್ತು.

ಚಿನ್ನಸ್ವಾಮಿ ಬಾಂಬ್ ಸ್ಫೋಟದಲ್ಲೂ ಭಟ್ಕಳ್ ಭಾಗಿ
2010 ಏಪ್ರಿಲ್ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲೂ ಈ ಯಾಸಿನ್ ಭಟ್ಕಳ್ ಕೈವಾಡವಿದೆ ಎನ್ನಲಾಗಿದೆ.

ಅಂದು ಆರ್‌ಸಿಬಿ-ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನ ಬಾಂಬ್ ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ ಆರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ಭಟ್ಕಳ್ ಬಂಧನ ಖಚಿತಪಡಿಸಿದ ಗೃಹ ಸಚಿವ ಶಿಂಧೆ
ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಬಂಧನವನ್ನು ಖಚಿತ ಪಡಿಸಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು, ಭಾರತ-ನೇಪಾಳ ಗಡಿಯಲ್ಲಿ ಇಂಡಿಯನ್ ಮುಜಾಹಿದ್ದೀನ್ ಮಾಸ್ಟರ್ ಮೈಂಡ್ ಭಟ್ಕಳನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಭಟ್ಕಳ್ ಈಗ ಬಿಹಾರ ಪೊಲೀಸರ ವಶದಲ್ಲಿದ್ದು, ಬಿಹಾರದ ಬೆತ್ತಿಹಾ ಪ್ರದೇಶದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಬಂಧಿತ ಉಗ್ರ, ದಾವೂದ್ ಇಬ್ರಾಹಿಂ ಆಪ್ತ ಅಬ್ದುಲ್ ಕರೀಂ ತುಂಡಾ ನೀಡಿದ ಮಾಹಿತಿ ಆಧಾರದ ಮೇಲೆ ನಿನ್ನೆ ರಾತ್ರಿಯೇ ಯಾಸಿನ್ ಭಟ್ಕಳ್‌ನನ್ನು ಬಂಧಿಸಲಾಗಿದೆ. ಅಲ್ಲದೆ ಭಟ್ಕಳ್ ಜೊತೆಗೆ ಮತ್ತೊಬ್ಬ ಉಗ್ರ ಅಸದುಲ್ಲಾ ಅಖ್ತರ್ ಹಡ್ಡಿಯನ್ನು ಸಹ ಬಂಧಿಸಲಾಗಿದೆ ಎಂದು ಶಿಂಧೆ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement