ರಶೀದ್ ಮಲಬಾರಿ, ಮಹಮದ್ ಹಸೀನ್‌ಗೆ 5 ವರ್ಷ ಜೈಲು
ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ..
ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಬಾರಿ ಹಾಗೂ ಆತನ ಸಹಚರ ಮಹಮದ್ ಹಸೀನ್‌ಗೆ ಮಂಗಳೂರು ಕೋರ್ಟ್ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇಂದು ಶಿಕ್ಷೆ ಪ್ರಕಟಿಸಿದ ಮಂಗಳೂರು ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಂ.ಎನ್.ನಾಯಕ್ ಅವರು, ಇಬ್ಬರೂ ಅಪರಾಧಿಗಳಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ತಲಾ 11,500 ರುಪಾಯಿ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟದಿದ್ದರೆ 1 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.
ಶಸ್ತ್ರಾಸ್ತ್ರ ಕಾಯ್ದೆಯಡಿ 2009ರಲ್ಲಿ ರಶೀದ್‌ನನ್ನು ಕೇರಳದ ಕಾಸರಗೋಡಿನ ಚಟ್ಟಾಂಚಾಲ್‌ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದರು.
ಇನ್ನು ಕೋರ್ಟ್ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ ರಶೀದ್, ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಪೊಲೀಸರು ಸಂಘ ಪರಿವಾರದವರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ತಾನು ಮುಸ್ಲಿಂ ಎಂಬ ಕಾರಣಕ್ಕೆ ಶಿಕ್ಷೆ ನೀಡಲಾಗಿದೆ ಎಂದು ಹೇಳಿರುವ ರಶೀದ್, ಜೈಲಿನಿಂದ ಹೊರಬಂದ ನಂತರ ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನರನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಸಂಸದ ವರುಣ್ ಗಾಂಧಿ ಹಾಗೂ ಪ್ರಮೋದ್ ಮುತಾಲಿಕ್ ಹತ್ಯೆಗೆ ಸಂಚು ರೂಪಿಸಿದ ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಅಂದಿನ ಡಿಸಿಐಬಿ ಇನ್ಸ್ಪೆಕ್ಟರ್ ಎಚ್.ಎನ್.ವೆಂಕಟೇಶ್ ಪ್ರಸನ್ನ ಮತ್ತು ತಂಡ ಆರೋಪಿಗಳನ್ನು ಬಂಧಿಸಿತ್ತು. ಈ ವೇಳೆ ರಶೀದ್ ಬಳಿ ಇದ್ದ 9ಎಂಎಂ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈಗ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಬಗ್ಗೆ ಮಾತ್ರ ಆರೋಪ ಸಾಬೀತಾಗಿದ್ದು, ಶಿಕ್ಷೆ ವಿಧಿಸಲಾಗಿದೆ.