ಸೋನಿಯಾ, ರಾಹುಲ್ ವಿರುದ್ಧ ಅಸಾರಾಂ ಬಾಪು ಕಿಡಿ
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಸಾರಾಂ ಬಾಪು, ತನ್ನ ಮೇಲಿನ ಆರೋಪದ ಹಿಂದೆ...
ಭೋಪಾಲ್: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಸಾರಾಂ ಬಾಪು, ತನ್ನ ಮೇಲಿನ ಆರೋಪದ ಹಿಂದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ನಾನು ಯಾವುದೇ ಪಕ್ಷದ ವಿರುದ್ಧ ದ್ವೇಷ ಸಾಧಿಸುತ್ತಿಲ್ಲ. ಆದರೆ ನನ್ನ ಮೇಲಿನ ಆರೋಪದ ಹಿಂದೆ ಸೋನಿಯಾ ಮತ್ತು ಅವರ ಪುತ್ರ ರಾಹುಲ್‌ನ ಪಿತೂರಿ ನಡೆದಿದೆ ಎಂದು ನನ್ನಲ್ಲಿ ಕೆಲವರು ಹೇಳಿದ್ದಾರೆ. ಆವಾಗ ನಾನು ಅವರಲ್ಲಿ, ಸೋನಿಯಾ ಮತ್ತು ರಾಹುಲ್ ನನ್ನ ವಿರುದ್ಧ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಹೇಳಿದ್ದೇನೆ ಎಂದು ಅಸಾರಾಂ ಬಾಪು ಹೇಳಿದ್ದಾರೆ.
ಏತನ್ಮಧ್ಯೆ, ಸೋನಿಯಾ ವಿರುದ್ಧ ನೇರ ಆರೋಪ ಮಾಡುತ್ತಿದ್ದೀರಾ? ಎಂದು ಮಾಧ್ಯಮದವರು ಕೇಳಿದಾಗ, ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ನನ್ನ ಅರಿವಿಗೆ ಬಂದ ವಿಷಯವನ್ನು ನಾನು ಹೇಳುತ್ತಿದ್ದೇನೆ ಎಂದು ಬಾಪು ಉತ್ತರಿಸಿದ್ದಾರೆ.
ಮಾತ್ರವಲ್ಲದೆ ತಾನು ರಾಜಕೀಯ ಪಕ್ಷದ ಬೆಂಬಲವನ್ನು ಬಯಸುತ್ತಿಲ್ಲ ಎಂದು ಬಾಪು ಹೇಳಿದ್ದಾರೆ.
ಆದಾಗ್ಯೂ, ತನ್ನ ಮೇಲಿರುವ ಆರೋಪವನ್ನು ಅಲ್ಲಗೆಳೆದ ಬಾಪು, ನಾನು ಇನ್ಮುಂದೆ ಹೆಚ್ಚಿನ ಕಾಲಾವಕಾಶವನ್ನು ಕೇಳಲ್ಲ. ಇದರ ಬದಲು ದೇಶದಾದ್ಯಂತವಿರುವ ನನ್ನ ಹಿಂಬಾಲಕರು ರಸ್ತೆಗಿಳಿಯಲಿದ್ದಾರೆ ಎಂದು ಹೇಳಿದ್ದಾರೆ.