ರುಪಾಯಿ ಅಪಮೌಲ್ಯಕ್ಕೆ ಬಾಹ್ಯ ಅಂಶಗಳು ಕಾರಣ: ಪ್ರಧಾನಿ
ರುಪಾಯಿ ಅಪಮೌಲ್ಯಕ್ಕೆ ಜಾಗತಿಕ ಅಂಶಗಳು ಕಾರಣ ಎಂದು ದೂರಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು,..
ನವದೆಹಲಿ: ರುಪಾಯಿ ಅಪಮೌಲ್ಯಕ್ಕೆ ಜಾಗತಿಕ ಅಂಶಗಳು ಕಾರಣ ಎಂದು ದೂರಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಮೌಲ್ಯ ಕುಸಿತ ತಡೆಗೆ ತ್ವರಿತ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
ರುಪಾಯಿ ಸಾರ್ವಕಾಲಿಕ ದಾಖಲೆ ಕುಸಿತದ ಬಗ್ಗೆ ಇಂದು ಲೋಕಸಭೆಯಲ್ಲಿ ಹೇಳಿಕೆ ನೀಡಿದ ಪ್ರಧಾನಿ, ಜಾಗತಿಕ ಪರಿಣಾಮದಿಂದ ರುಪಾಯಿಗೆ ಪೆಟ್ಟು ಬಿದ್ದಿದೆ. ಅಮೆರಿಕದ ಆರ್ಥಿಕತೆ ಚೇತರಿಸಿಕೊಂಡಿದ್ದೇ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ. ಇದರಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕರೆನ್ಸಿಯ ಮೌಲ್ಯ ಕೂಡ ಕುಸಿಯುತ್ತಿದೆ ಎಂದರು.
ಕಬ್ಬಿಣದ ಅದಿರು ರಫ್ತು ಕಡಿಮೆಯಾಗಿದ್ದರಿಂದ ಚಾಲ್ತಿ ಖಾತೆ ಕೊರತೆಗೆ ಕಾರಣವಾಗಿದ್ದು, ಚಾಲ್ತಿ ಖಾತೆ ಕೊರತೆ ನೀಗಿಸಲು ಸರ್ಕಾರ ತ್ವರಿತ ಕ್ರಮ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.
ಆರ್ಬಿಐ ಮತ್ತು ಕೇಂದ್ರ ಸರ್ಕಾರ ರುಪಾಯಿ ಮೌಲ್ಯ ಕುಸಿಯದಂತೆ ಕ್ರಮ ಕೈಗೊಂಡಿದೆ. ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಚೇತರಿಕೆ ಕಾಣಲಿದೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾದ ಬಂಗಾರದ ಮೇಲಿನ ನಮ್ಮ ಮೋಹ ಸಹ ಕಡಿಮೆಯಾಗಬೇಕು ಎಂದು ಸಿಂಗ್ ಹೇಳಿದರು.