ಅಸಾರಾಂ ಬಾಪು ಬಂಧನ ಆಗ್ರಹಿಸಿ ಅಮರಣಾಂತ ಉಪವಾಸ
ರಾಜಸ್ತಾನದ ಜೋಧಪುರ್‌ನಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಹದಿಹರೆಯ...
ನವದೆಹಲಿ: ರಾಜಸ್ತಾನದ ಜೋಧಪುರ್‌ನಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿರುವ ಹದಿಹರೆಯದ ಬಾಲಕಿಯ ಅಪ್ಪ, ಅಸಾರಾಂ ಅವರ ಬಂಧನ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬಾಲಕಿಯ ಅಪ್ಪ ಶನಿವಾರ ಉಪವಾಸ ಆರಂಭಿಸಿದ್ದು, ಅಸಾರಾಂ ಬಂಧನಕ್ಕೊಳಗಾಗುವವರೆಗೆ ತಾನು ಯಾವುದೇ ಆಹಾರವನ್ನು ಸೇವಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ, ಅಸಾರಾಂ ಬಾಪು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯಾರಿಗಾದರೂ ಹೇಳಿದರೆ ಕೊಂದು ಹಾಕುವೆ ಎಂದು ತನ್ನ ಮಗಳಿಗೆ ಬೆದರಿಕೆಯನ್ನೊಡ್ಡಿದ್ದರು ಎಂದು ಬಾಲಕಿಯ ಅಪ್ಪ ದೂರಿದ್ದರು.
ತಾನು ಅಸಾರಾಂ ಬಾಪುನನ್ನು ದೇವರು ಎಂದು ನಂಬಿದ್ದೆ. ಆದರೆ ಆತ ಇಂಥಾ ನಾಚಿಕೆಗೇಡಿನ ಕೃತ್ಯವನ್ನೆಸಗುವ ಮೂಲಕ ತನ್ನ ಹಾಗು ತಮ್ಮ ಕುಟುಂಬದ ನಂಬಿಕೆಗೆ ದ್ರೋಹ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಅದೇ ವೇಳೆ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದಕ್ಕಾಗಿ ಅಸಾರಾಂ ಬಾಪುವನ್ನು ಗಲ್ಲಿಗೇರಿಸಿ ಎಂದು ಬಾಲಕಿಯ ಅಪ್ಪ ಒತ್ತಾಯಿಸಿದ್ದಾರೆ.