ದೆಹಲಿ ಗ್ಯಾಂಗ್‌ರೇಪ್: ಬಾಲಾಪರಾಧಿಗೆ 3 ವರ್ಷ ಜೈಲು
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೊದಲ ತೀರ್ಪು ಶನಿವಾರ ಪ್ರಕಟಗೊಂಡಿದ್ದು, ಗ್ಯಾಂಗ್‌ರೇಪ್ ಪ್ರಕರಣದ ಬಾಲಾಪರಾಧಿ ತಪ್ಪಿತಸ್ಥ..
ನವದೆಹಲಿ: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೊದಲ ತೀರ್ಪು ಶನಿವಾರ ಪ್ರಕಟಗೊಂಡಿದ್ದು, ಗ್ಯಾಂಗ್‌ರೇಪ್ ಪ್ರಕರಣದ ಬಾಲಾಪರಾಧಿ ತಪ್ಪಿತಸ್ಥ ಎಂದು ಬಾಲಾಪರಾಧಿ ನ್ಯಾಯಮಂಡಳಿ ಮಹತ್ವದ ತೀರ್ಪು ನೀಡಿದೆ.
ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕನ ಕೃತ್ಯ ಸಾಬೀತಾಗಿದ್ದು, ಇತನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ 8 ತಿಂಗಳು ಜೈಲು ಶಿಕ್ಷೆ ಅನುಭವಿಸಿರುವ ಈ ಬಾಲಾಪರಾಧಿಗೆ, ಇನ್ನು 2 ವರ್ಷ 4 ತಿಂಗಳು ಶಿಕ್ಷೆ ಮಾತ್ರ ಬಾಕಿ ಇದೆ.
ಬಾಲಾರೋಪಿ ಎಂಬ ಶಬ್ದದ ವ್ಯಾಖ್ಯಾನದ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗದ ಹಿನ್ನೆಲೆಯಲ್ಲಿ ಪ್ರಕಣದ ತೀರ್ಪನ್ನು ಮೂರು ಬಾರಿ ಮುಂದೂಡಲಾಗಿತ್ತು. ಆದರೆ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲು ಅಭ್ಯಂತರವಿಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಾಲಾಪರಾಧಿ ನ್ಯಾಯಮಂಡಳಿ ತೀರ್ಪು ನೀಡಿದೆ.
ತೀರ್ಪಿನ ವಿರುದ್ಧ ಯುವತಿ ತಾಯಿ ಆಕ್ರೋಶ
ಇನ್ನು ಬಾಲಾಪರಾಧಿ ನ್ಯಾಯಮಂಡಳಿಯ ತೀರ್ಪಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯುವತಿ ತಾಯಿ, ಈ ಶಿಕ್ಷೆ ವಿಧಿಸುವುದರ ಬದಲು ಈಗಲೇ ಬಿಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾಲ ಅತ್ಯಾಚಾರಿಗೆ ಇನ್ನೂ ಹೆಚ್ಚಿನ ಶಿಕ್ಷೆ ವಿಧಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಕಳೆದ ಡಿ.16ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲೇ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ತೀವ್ರ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಡಿ. 29ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತ ವಯಸ್ಕ ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಪ್ರಮುಖ ಆರೋಪಿ ರಾಮ್‌ಸಿಂಗ್ ಜೈಲಿನೊಳಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.