ಅತ್ಯಾಚಾರ ಸಂಬಂಧಿ ಕಾನೂನಿಗೆ ತಿದ್ದುಪಡಿ ಅಗತ್ಯ: ಸುಪ್ರೀಂ
ಅತ್ಯಾಚಾರಕ್ಕೊಳಗಾದವರಿಗೆ ಶೀಘ್ರ ನ್ಯಾಯ ಒದಗಿಸಲು ಕಾನೂನಿಗೆ ವ್ಯಾಪಕ ತಿದ್ದುಪಡಿ ಮಾಡುವ ಅಗತ್ಯ ಇದೆ..
ನವದೆಹಲಿ: ಅತ್ಯಾಚಾರಕ್ಕೊಳಗಾದವರಿಗೆ ಶೀಘ್ರ ನ್ಯಾಯ ಒದಗಿಸಲು ಕಾನೂನಿಗೆ ವ್ಯಾಪಕ ತಿದ್ದುಪಡಿ ಮಾಡುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್,
ಈ ಸಂಬಂಧ ವಿವರಣೆ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಅತ್ಯಾಚಾರಕ್ಕೊಳಗಾದವರಿಗೆ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಯಿಂದಷ್ಟೇ ಶೀಘ್ರ ನ್ಯಾಯಒದಗಿಸಲು ಸಾಧ್ಯವಾಗದು. ಈ ರೀತಿಯ ಹೀನಾಯ ಕೃತ್ಯಗಳನ್ನು ತಡೆಯಲು ತ್ವರಿತಗತಿಯ ವಿಚಾರಣಾ ಪ್ರಕ್ರಿಯೆಯನ್ನೂ ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಆದರೆ, ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ಪದೇ ಪದೆ ನಡೆಯುತ್ತಿದ್ದರೂ ನಮ್ಮಲ್ಲಿ ಈ ರೀತಿಯ ತ್ವರಿತಗತಿ ವಿಚಾರಣಾ ಪ್ರಕ್ರಿಯೆ ಅಸ್ತಿತ್ವದಲ್ಲಿಲ್ಲದಿರುವುದು ಬೇಸರದ ಸಂಗತಿ ಎಂದು ನ್ಯಾ. ಗ್ಯಾನ್ ಸುಧಾ ಮಿಶ್ರಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಕಾನೂನಿಗೆ ಅಗತ್ಯ ತಿದ್ದುಪಡಿ ತರುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸದ ನ್ಯಾಯಾಲಯ, ಪೊಲೀಸರಂತೆ
ಪ್ರತ್ಯಕ್ಷದರ್ಶಿಗಳು ಮತ್ತು ಅತ್ಯಾಚಾರಕ್ಕೊಳಗಾದವರ ಹೇಳಿಕೆಯನ್ನು ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ಯಾಕೆ ದಾಖಲಿಸಿಕೊಳ್ಳುವಂತಿಲ್ಲ ಎಂದೂ ಸರ್ಕಾರದಿಂದ ವಿವರಣೆ ಕೇಳಿದೆ.
ಪ್ರತ್ಯಕ್ಷದರ್ಶಿಗಳು ಹಾಗೂ ಅತ್ಯಾಚಾರಕ್ಕೊಳಗಾದವರ ಹೇಳಿಕೆಯನ್ನು ಪದೇ ಪದೆ ದಾಖಲಿಸುವ ಪ್ರಕ್ರಿಯೆಯಿಂದಲೇ ಅತ್ಯಾಚಾರ ಪ್ರಕರಣದ ವಿಚಾರಣೆ ವಿಳಂಬಗೊಳ್ಳುತ್ತಿದೆ. ಇದಕ್ಕೆ ಅಂತ್ಯ ಹಾಡುವ ಅಗತ್ಯ ಇದೆ ಎಂದು ನ್ಯಾಯಾಲಯ ತಿಳಿಸಿದೆ.