ಅಸಾರಾಂ ಬಾಪು 1 ದಿನ ಪೊಲೀಸ್ ವಶಕ್ಕೆ
ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ..
ಜೊಧ್‌ಪುರ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಒಂದು ದಿನ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ನಿನ್ನೆ ಮಧ್ಯರಾತ್ರಿ ಇಂದೋರ್‌ನ ಆಶ್ರಮದಲ್ಲಿ ಅಸಾರಾಂ ಬಾಪು ಅವರನ್ನು ಬಂಧಿಸಿದ್ದ ಪೊಲೀಸರು, ಭಾರಿ ಭದ್ರತೆಯೊಂದಿಗೆ ಇಂದು ಮಧ್ಯಾಹ್ನ ಜೋಧ್‌ಪುರಕ್ಕೆ ಕರೆ ತಂದು, ಕೋರ್ಟ್‌ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಜೋಧ್‌ಪುರ ಕೋರ್ಟ್ ಒಂದು ದಿನದ ಮಟ್ಟಿಗೆ ಪೊಲೀಸ್ ವಶಕ್ಕೆ ನೀಡಿದೆ.
ಇದಕ್ಕು ಮುನ್ನ ಅಸಾರಾಂ ಬಾಪು ಅವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ ವಿಚಾರಣೆ ಸಹಕರಿಸದ ಹಿನ್ನೆಲೆಯಲ್ಲಿ ಪೊಲೀಸರು ಬಾಪುನನ್ನು ಕೋರ್ಟ್ ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಕೋರಿದರು. ಇದಕ್ಕೆ ಒಪ್ಪದ ಕೋರ್ಟ್, ಒಂದು ದಿನ ಮಾತ್ರ ಪೊಲೀಸ್ ವಶಕ್ಕೆ ನೀಡಿ, ಆದೇಶಿಸಿದೆ.
ಕಳೆದ ಮಂಗಳವಾರ ರಾಜಸ್ತಾನದ ಜೊಧ್‌ಪುರದಲ್ಲಿರುವ ಆಶ್ರಮದಲ್ಲಿ ಬಾಪು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 16 ವರ್ಷದ ಬಾಲಕಿಯೊಬ್ಬಳು ಸೆಂಟ್ರಲ್ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಳು. ಕೇಸ್ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದದ್ದು ರಾಜಸ್ತಾನದಲ್ಲಾಗಿರುವುದರಿಂದ ಪ್ರಕರಣವನ್ನು ರಾಜಸ್ತಾನ ಪೊಲೀಸರಿಗೆ ಹಸ್ತಾಂತರಿಸಿದ್ದರು.