ವರದಕ್ಷಿಣೆ ಪ್ರಕರಣ: ಭಾರತದಲ್ಲಿ ಪ್ರತಿ ಗಂಟೆಗೆ ಓರ್ವ ಮಹಿಳೆ ಸಾವು
ಭಾರತದಲ್ಲಿ ವರದಕ್ಷಿಣೆ ಸಂಬಂಧಿ ಸಮಸ್ಯೆಗಳಲ್ಲಿ ಸಿಲುಕಿ ಪ್ರತೀ ಗಂಟೆಗೆ ಒಬ್ಬರಂತೆ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ ಎಂದು ಸಮೀಕ್ಷೆ...
ನವದೆಹಲಿ: ಭಾರತದಲ್ಲಿ ವರದಕ್ಷಿಣೆ ಸಂಬಂಧಿ ಸಮಸ್ಯೆಗಳಲ್ಲಿ ಸಿಲುಕಿ ಪ್ರತೀ ಗಂಟೆಗೆ ಒಬ್ಬರಂತೆ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ನಡೆಸಿದ ಸಮೀಕ್ಷೆಯ ಪ್ರಕಾರ 2012ರಲ್ಲಿ ದೇಶಾದ್ಯಂತ ವರದಕ್ಷಿಣೆ ಪ್ರಕರಣಗಳಲ್ಲಿ 8,233 ಮಹಿಳೆಯರು ಸಾವಿಗೀಡಾಗಿದ್ದಾರೆ. ಅಂದ ಹಾಗೆ ಪ್ರತೀ ಗಂಟೆಗೆ ಒಬ್ಬರಂತೆ ಮಹಿಳೆಯರು ಈ ಪಿಡುಗಿಗೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ. ಸಮೀಕ್ಷೆಯ ಪ್ರಕಾರ 2007 ರಿಂದ 2011ರ ಅವಧಿಯಲ್ಲಿ ಇಂಥಾ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ.
2011ರಲ್ಲಿ ವರದಕ್ಷಿಣೆ ಪ್ರಕರಣದಲ್ಲಿ ಸಾವನ್ನಪ್ಪಿದ ಮಹಿಳೆಯರ ಸಂಖ್ಯೆ 8,618 ಆಗಿತ್ತು ಹಾಗು ಒಟ್ಟಾರೆ ದೋಷ ನಿರ್ಣಯ ದರ 35.8 ಆಗಿದೆ. ಅದೇ ವೇಳೆ 2012ರಲ್ಲಿ ದೋಷ ನಿರ್ಣಯ ದರ 32 ಶೇ. ಆಗಿದೆ.
2007ರಲ್ಲಿ ವರದಕ್ಷಿಣೆ ಸಂಬಂಧಿ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 8,093 ಆಗಿದ್ದು 2008ರಲ್ಲಿ ಸಾವಿನ ಸಂಖ್ಯೆ 8,172 ಮತ್ತು 2009ರಲ್ಲಿ ಸಾವಿನ ಸಂಖ್ಯೆ 8,383 ಆಗಿದೆ.
2010ರ ಅವಧಿಯಲ್ಲಿ ಇಂಥಾ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 8,391 ಆಗಿದೆ.