ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನರಭಕ್ಷಕ ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಆದೇಶ

ಈವರೆಗೆ ನಾಲ್ವರನ್ನು ಬಲಿ ಪಡೆದ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

Lingaraj Badiger
Updated On : 4 Dec 2013, 12:43 pm

ಮೈಸೂರು: ಈವರೆಗೆ ನಾಲ್ವರನ್ನು ಬಲಿ ಪಡೆದ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕುವಂತೆ ಕೇಂದ್ರ ಸರ್ಕಾರ ಬುಧವಾರ ಆದೇಶಿಸಿದೆ.

ನಿನ್ನೆಯಷ್ಟೇ ಹೆಗ್ಗಡೆದೇವನ ಕೋಟೆ ತಾಲೂಕಿನ ಹೆಡಿಯಾಲ ಅರಣ್ಯ ಪ್ರದೇಶದ ಚಿಕ್ಕಬರಗಿಯಲ್ಲಿ ಮತ್ತೊಬ್ಬನನ್ನು ಕೊಂದು ಹಾಕಿದ ಈ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಸಾಯಿಸುವಂತೆ ಇಂದು ಕೇಂದ್ರ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದೆ.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಹುಲಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದು, ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಸುತ್ತಮುತ್ತಲು ಹಾಗೂ ಬಂಡಿಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಹೆಗ್ಗಡಹಳ್ಳಿಯ ಬಸಪ್ಪ (60) ಎಂಬಾತನೇ ನಿನ್ನೆ ಹುಲಿಗೆ ಬಲಿಯಾದ ದುರ್ದೈವಿ. ಈತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನರಭಕ್ಷಕ ವ್ಯಾಘ್ರವು ಈತನನ್ನು ಎಳೆದೊಯ್ದು, ತಲೆ ಭಾಗವನ್ನು ಬಿಟ್ಟು ದೇಹವನ್ನೆಲ್ಲ ತಿಂದು ಹಾಕಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಒಬ್ಬನನ್ನು ಹಾಗೂ ಬಂಡಿಪುರ ಅರಣ್ಯ ವಲಯದಲ್ಲಿ ಮೂವರು ಒಟ್ಟು ಇದುವರೆಗೆ ನಾಲ್ವರು ವ್ಯಾಘ್ರಕ್ಕೆ ಬಲಿಯಾಗಿದ್ದಾರೆ.

ಕಳೆದ ನ.27ರಂದು ನರಭಕ್ಷಕ ಹುಲಿಯ ದಾಳಿಗೆ ಎಚ್.ಡಿ. ಕೋಟೆ ತಾಲೂಕು ನಡಹಾಡಿ ಗ್ರಾಮದ ಬಸವರಾಜು ಎಂಬವರು ಬಲಿಯಾಗಿದ್ದರು. ಅಂದು ಅಕ್ಕಪಕ್ಕದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.               

ಇದಾದ 2 ದಿನಗಳಲ್ಲಿ ನ.29 ರಂದು ಸೀಗೆವಾಡಿ ಹಾಡಿಯ ಚಲುವ (40) ಎಂಬಾತನನ್ನು ನರಭಕ್ಷಕ ಹುಲಿ ಬಲಿ ತೆಗೆದುಕೊಂಡಿತ್ತು. ಅಲ್ಲದೆ ಇದೆ ಪ್ರಕರಣದಲ್ಲಿ ಚಿಕ್ಕ ಎಂಬಾತ ಕೂಡ ಗಾಯಗೊಂಡಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement