ನ್ಯಾ. ಗಂಗೂಲಿ ವಿರುದ್ಧ ಸ್ವತಃ ದೂರು ನೀಡಿ, ಯುವತಿಗೆ ಪೊಲೀಸ್ ಸೂಚನೆ
ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಕಾನೂನು ತರಬೇತಿ ವಿದ್ಯಾರ್ಥಿನಿ, ಸ್ವತಃ ತಾವು ಮುಂದೆ ಬಂದು ದೂರು ದಾಖಲಿಸಲಿ ಎಂದು ದೆಹಲಿ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ನ್ಯಾಯಾಮೂರ್ತಿಗಳ ವಿರುದ್ದ ಗಂಭೀರ ಆರೋಪ ಮಾಡಿರುವ ವಿದ್ಯಾರ್ಥಿನಿ ಸ್ವತಃ ದೂರು ದಾಖಲಿಸುವ ಜತೆಗೆ ಹೇಳಿಕೆ ನೀಡುವಂತೆ ನಾವು ಯುವತಿಗೆ ಮೇಲ್ ಕಳುಹಿಸಿದ್ದೇವೆ. ಕಿರುಕುಳಕ್ಕೆ ಒಳಗಾದವರು ಮುಂದೆ ಬಂದರೆ ಮಾತ್ರ ಮುಂದಿನ ಕ್ರಮ ಕುರಿತು ನಾವು ನಿರ್ಧರಿಸಲು ಸಾಧ್ಯ ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ಎಸ್‌ಬಿಎಸ್ ತ್ಯಾಗಿ ಹೇಳಿದ್ದರು.
ಈ ಮಧ್ಯೆ, ದೆಹಲಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕರಾದ ಎಸ್.ಎನ್.ಶರ್ಮಾ ಅವರು ತಿಲಕ್ ಮಾರ್ಗ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಪೊಲೀಸರು ಯಾವುದೇ ದೂರು ದಾಖಲಿಸಿಲ್ಲ. ದೂರು ದಾಖಲಿಸಬೇಕಾದರೆ ಕಿರುಕುಳಕ್ಕೆ ಒಳಗಾದ ಮಹಿಳೆಯೇ ಮುಂದೆ ಬರಲಿ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾ. ಗಂಗೂಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ತಕ್ಷಣ ತನಿಖೆಗಾಗಿ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು. ಕಾನೂನು ತರಬೇತಿ ವಿದ್ಯಾರ್ಥಿನಿ ಜತೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರು ಲೈಂಗಿಕವಾಗಿ ಅಸಭ್ಯ ವರ್ತನೆ ತೋರಿದ್ದಾರೆ ಎಂಬುದನ್ನು ಸಮಿತಿ ದೃಢಪಡಿಸಿದೆ.